ಲೋಕಸಭೆ ಚುನಾವಣೆ: ಡಿಸಿ ನೇತೃತ್ವದ ತಂಡದಿಂದ ಗ್ರಾಮೀಣ ಪ್ರದೇಶದಲ್ಲಿ ಮತದಾನ ಜಾಗೃತಿ
ವಿಜಯಪುರ. ಮಾ.23:ಜಿಲ್ಲಾಧಿಕಾರಿ ಟಿ. ಭೂಬಾಲನ್ ಹಾಗೂ ಅಧಿಕಾರಿಗಳು ಜಿಲ್ಲೆಯ ಮನಗೂಳಿ,ಯರನಾಳ ಗ್ರಾಮಗಳಲ್ಲಿ ಮನೆ, ಮನೆಗಳಿಗೆ ಸಂಚರಿಸಿ ಮತದಾನ ಜಾಗೃತಿ ಮೂಡಿಸಿದರು.
ಪ್ರಜಾಪ್ರಭುತ್ವದ ಸಂವಿಧಾನಿಕ ಹಕ್ಕಾಗಿರುವ ಮತದಾನದಿಂದ ಯಾವುದೇ ಮತದಾರರು ಮತದಾನದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಪ್ರಸ್ತುತ ಲೋಕಸಭಾ ಚುನಾವಣೆಗೆ 85ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲಿಯೇ ಮತ ಚಲಾವಣೆ ಮಾಡುವ ಅವಕಾಶ ನೀಡಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು, ಜಿಲ್ಲೆಯ ಮನಗೂಳಿ ಹಾಗೂ ಯರನಾಳ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಮತಗಟ್ಟೆಗೆ ಬಂದು ಮತದಾನ ಮಾಡಲು ನಿಶಕ್ತರಾಗಿರುವವರನ್ನು ಮತಗಟ್ಟೆಯ ಬಿಎಲ್‍ಓ ಗಳು ಗುರುತಿಸಿ ನಮೂನೆ 12ಡಿ ಪತ್ರದ ಮೂಲಕ ಮನೆಯಲ್ಲೇ ಮತ ಚಲಾವಣೆ ಮಾಡುವ ಅವಕಾಶ ನೀಡುತ್ತಾರೆ. ಇದನ್ನು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
85 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮತ್ತು ವಿಕಲಚೇತನ ಮತದಾರರಿಗೆ ನಮೂನೆ 12 ಡಿ ಪತ್ರ ವಿತರಿಸುವ ಮೂಲಕ, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜಿಲ್ಲೆಯಲ್ಲಿ ಯಾರೊಬ್ಬರೂ ಮತದಾನದಿಂದ ದೂರ ಉಳಿಯದಂತೆ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು ಕಾರ್ಯೋನ್ಮುಖರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.