ರಾಜೀ ರಹಿತ ಹೋರಾಟದ ಮೇರು ಪರ್ವತ ಭಗತ್ ಸಿಂಗ್
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೩- ಪರಕೀಯರಿಂದ ನಲುಗಿದ ದೇಶದ ಜನರ ವಿಮೋಚನೆಗೆ ಹೋರಾಟ ನಡೆಸುವ ಮೂಲಕ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್, ರಾಜೀರಹಿತ ಹೋರಾಟದ ಮೇರು ಪರ್ವತ ಎಂದು ಸಂಘದ ಗೌರವಾದ್ಯಕ್ಷ ನಾಗರಾಜ ಪೂಜಾರ್ ಹೇಳಿದರು.
ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಭಗತ್ ಸಿಂಗ್ ಆಟೋ ಚಾಲಕರ ಸಂಘದಿಂದ ಹಮ್ಮಿಕೊಂಡಿದ್ದ ಭಗತ್ ಸಿಂಗ್ ಮತ್ತು ಸಹ ಗೆಳೆಯರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಭಗತ್ ಸಿಂಗ್ ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರಂಥ ದಿಟ್ಟ ಯುವಕರ ಕೆಚ್ಚೆದೆಯ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ಗೊಡ್ಡು ಬೆದರಿಕೆಗಳಿಗೆ ಹೆದರದೇ, ಯಾವುದೇ ರಾಜಿಗಳಿಗೆ ಒಳಗಾಗದೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಭಗತ್ ಸಿಂಗ್ ಮತ್ತವರ ಸ್ನೇಹಿತರ ಧೈರ್ಯ ಯುವಜನತೆಗೆ ಮಾದರಿಯಾಗಿದೆ. ಇಡೀ ದೇಶವನ್ನೇ ಆವರಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ೬ ಲಕ್ಷಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಆದರೆ ನೈಜ ಇತಿಹಾಸವನ್ನು ಮರೆಮಾಚಲಾಗಿದೆ. ದೇಶದ ದುಡಿಯುವ ಜನರ ಬಗ್ಗೆ ವಿಶೇಷ ಕಳಕಳಿ ಹೊಂದಿದ್ದ ಭಗತ್ ಮತ್ತು ಸಹಗೆಳೆಯರು ದೇಶದ ಜನರನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವುದಷ್ಟೇ ಅಲ್ಲದೇ ಭವಿಷ್ಯದ ಭಾರತವನ್ನು ಕಟ್ಟುವ ಮುನ್ನೋಟವನ್ನು ಹೊಂದಿದ್ದರು. ಹಾಗಾಗಿ ಇಂದಿನ ಯುವಕರು ಭಗತ್ ಸಿಂಗ್ ಮತ್ತವರ ಸಹಚರರ ಆಶಯಗಳನ್ನು ಈಡೇರಿಸುವ ಮೂಲಕ ಪ್ರಜಾಸತ್ತಾತ್ಮಕ ಅಂಶಗಳಡಿ ಭಾರತವನ್ನು ಪುನರ್ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಆಟೊ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟದ ಕುಲುಮೆಗೆ ತಳ್ಳಿದೆ. ಇಡೀ ದೇಶದ ಸಂಪತ್ತನ್ನು ಅಂದಾನಿ, ಅಂಬಾನಿಯಂತಹ ಕಾರ್ಪೋರೇಟ್ ಉದ್ಯಮ ಶಕ್ತಿಗಳು ಕೊಳ್ಳೆ ಹೊಡೆಯುತ್ತಿವೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ಮಾರಾಟ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದರೂ ಆಡಳಿತಾರೂಢ ಸರಕಾರಗಳು ಜನರ ನೆರವಿಗೆ ಬರುತ್ತಿಲ್ಲ. ಸರಕಾರಗಳ ಜನವಿರೋಧಿ ಕ್ರಮಗಳನ್ನು ಬೀದಿಯಲ್ಲಿ ನಿಂತು ವಿರೋಧಿಸುವುದೇ ನಾವು ಹುತಾತ್ಮ ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡುವ ನಿಜವಾದ ಗೌರವ ಎಂದರು.
ಈ ಸಂದರ್ಭದಲ್ಲಿ ಆರ್.ಎಚ್ ಕಲಮಂಗಿ, ಬಸವರಾಜ ಬೇಳಗುರ್ಕಿ ತಾಲೂಕು ಕಾರ್ಯದರ್ಶಿ ಸಿಪಿಐಎಂಎಲ್ ಲಿಬರೇಶನ್, ಶೇಕ್ಷಾವಲಿ, ನಾಗಪ್ಪ ಬಿಂಗಿ, ದುರುಗಪ್ಪ, ಶಿವರಾಜ್, ಬಾಬು, ರಶೀದ್, ಬಾಬರ್, ರಾಜ, ರಾಜಪ್ಪ, ಶರಣಬಸವ,ಆನಂದ ಸ್ವಾಮಿ, ನಾಗರಾಜ, ಖಾಜಾಹುಸೇನ್, ಮಂಜು, ಮುರುಗೇಶ್ ಸೇರಿದಂತೆ ಇತರರಿದ್ದರು.