ಆರೋಗ್ಯ, ಆಹಾರ ಭದ್ರತೆ ಇವುಗಳ ಮೂಲಮಂತ್ರ ನೀರಿನಲ್ಲಡಗಿದೆ- ಡಾ. ಎಸ್.ಮಂಜಪ್ಪ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೩; 1993 ರಿಂದ ವಿಶ್ವ ಜಲದಿನ ಆಚರಿಸಲಾಗುತ್ತಿದೆ. ಈ ವರ್ಷ “ಶಾಂತಿಗಾಗಿ ನೀರಿನ ಸದ್ಭಳಕೆ” ಎಂಬ ಘೋಷ ವಾಕ್ಯದೊಂದಿಗೆ ವಿಶ್ವ ಜಲದಿನವನ್ನು ಆಚರಿಸಲಾಗುತ್ತಿದೆ. ಸುಸ್ಥಿರ ನಾಗರೀಕತೆಗೆ ಆರೋಗ್ಯ ಭದ್ರತೆ, ಶಕ್ತಿಯ ಭದ್ರತೆ ಹಾಗೂ ಆಹಾರ ಭದ್ರತೆ ಎಂಬ ಮೂರು ಮಂತ್ರಗಳಿವೆ. ಈ ಮೂರರಲ್ಲೂ ನೀರು ಮಹತ್ವದ ಪಾತ್ರ ಗಳಿಸಿದೆ ಎಂದು ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾಗ ಡಾ. ಎಸ್.ಮಂಜಪ್ಪ ತಿಳಿಸಿದರು. ಅವರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಬಾಲಭವನ ಸಮಿತಿ, ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ, ಸಂಯುಕ್ತವಾಗಿ ಏರ್ಪಡಿಸಿದ್ದ ವಿಶ್ವಜಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವಿಂದು ಪ್ರಯೋಗಶಾಲೆಯಲ್ಲಿಯೂ ನೀರನ್ನು ತಯಾರಿಸಬಹುದು. ಆದರೆ ಅದು ನಮ್ಮ ಬಳಕೆಯ ಪ್ರಮಾಣದಷ್ಟಲ್ಲ. ಆದ್ದರಿಂದ ಇರುವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳೋಣ ಎಂದರು. ಸಕಲ ಜೀವಚರಗಳಿಗೆಲ್ಲ ನೀರೆ ಮೂಲಾಧಾರ. ನೀರಿಲ್ಲದೆ ನಾವ್ಯಾರು ಇಲ್ಲ. ಆದ್ದರಿಂದ ನೀರಿನ ಸದ್ಭಳಕೆ ಮತ್ತು ಜಾಗೃತಿಗಾಗಿ ವಿಶ್ವ ಜಲದಿನ ಆಚರಿಸುತ್ತಿರುವುದು ಸಂತೋಷ ದಾಯಕವಾಗಿದೆ ಎಂದು ತಿಳಿಸಿದರು.ಸಮಾರಂಭದಲ್ಲಿ ಉಪನ್ಯಾಸ ನೀಡಿದ ಕೆ.ಸಿದ್ದೇಶ್ ಮಾತನಾಡಿ, ನೀರು ನಮಗಷ್ಟೇ ಸಿಮಿತವಲ್ಲ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನೀರು ಅಪರಿಮಿತ ಸಂಪನ್ಮೂಲ ಎಂದು ಬೋಧನೆ ಮಾಡುತ್ತೇವೆ. ಆದರೆ ಬಳಸಲು ಯೋಗ್ಯವಾದ ನೀರು ಮಾತ್ರ ಪರಿಮಿತ ಸಂಪನ್ಮೂಲವಾಗಿದೆ. ಭೂಮಿಯ ಮೇಲೆ ಶೇ.70% ಕ್ಕಿಂತ ಹೆಚ್ಚು ಭಾಗ ನೀರು ಆವರಿಸಿದ್ದರು ಕುಡಿಯಲು ಮತ್ತು ಬಳಕೆಗೆ ಯೋಗ್ಯವಾದ ನೀರು 0.0003ರಷ್ಟು ಇರುವುದು ನಮಗೆಲ್ಲ ತಿಳಿದಿದೆ. ಆದ್ದರಿಂದ ನಮ್ಮ ಪವಿತ್ರವಾದ ನದಿ, ಕೆರೆ, ಅಂತರ್ಜಲ ಹಾಗೂ ವಾಯುಮಂಡಲ ಸಂರಕ್ಷಣೆಯತ್ತ ಗಮನ ಹರಿಸಲು ತಿಳಿಸಿದರು. ನೀರಿನ ಕೊರತೆ ಉಂಟಾದಾಗ ನಾವು ನೀರಿನ ಲಭ್ಯತೆಯ ಹೊಸ ಆಕರದೆಡೆಗೆ ಚಿಂತಿಸುತ್ತೇವೆ ಹೊರತು ನೀರನ್ನು ಕೂಡಿಡುವ ಯಾವುದೇ ಪ್ರಯತ್ನ ಮಾಡುವುದಿಲ್ಲ. ಇದರಿಂದಾಗಿ ನಾವು ಮತ್ತಷ್ಟು ನೀರಿನ ಅಭಾವ ಎದುರಿಸು ವಂತಾಗಿದೆ. ಪ್ರತಿ ಬಾರಿ ಸರ್ಕಾರ ಜಲನಿರ್ವಹಣೆಗೆ ಮೀಡಲಿಡುವ ನೂರಾರು ಕೋಟಿ ಹಣದ ಬಹುಭಾಗ ಹೊಸ ಕೊಳವೆ ಬಾವಿ ಕೊರೆಸುವುದಕ್ಕೆ ವಿನಿಯೋಗವಾಗುತ್ತದೆ. ಇದು ತಾತ್ಕಲಿಕ ಪರಿಹಾರ ನೀಡಿದರು, ಮುಂದೆ ತೊಂದರೆಮಟ್ಟವನ್ನೆಚ್ಚಿಸಿ ಮುಂದೆ ಜಲಕ್ಷಾಮವನ್ನು ತರುತ್ತದೆ ಎಂದು ಎಚ್ಚರಿಸಿದರು. ಸಮಾರಂಭದ ಮುಖ್ಯಅತಿಥಿಗಳಾಗಿದ್ದ ಡಾ.ಜೆ.ಬಿ.ರಾಜ್ ಮಾತನಾಡಿ, ಜಲಕ್ಷಾಮ ನಿವಾರಿಸುವ ಸಲುವಾಗಿ ಮೋಡಬಿತ್ತನೆಯಂತಹ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆದರೆ ರಾಸಾಯನಿಕ ಬಳಕೆಗಳಿಂದ ತರಿಸಿದ ಮಳೆ ಎಷ್ಟು ಉಪಯೋಗಕಾರಿ ? ಅಲ್ಲದೆ ಇದು ತುಂಬಾ ವೆಚ್ಚದಾಯಕವಾಗಿದೆ. ಕುಡಿಯುವ ನೀರಿಗಾಗಿ ಈಗ ವಾಯುಮಂಡಲದಲ್ಲಿನ ನೀರಾವಿ ತಣಿಸಿ, ಶುದ್ಧ ಕುಡಿಯುವ ನೀರನ್ನು ನೀಡುವ ಯಂತ್ರಗಳು ಬರುತ್ತಿವೆ. 2005ರಲ್ಲಿಯೇ ಮುಂಬೈ ನಗರದಲ್ಲಿ ವಾಟರ್ ಮೇಕರ್ ಹೆಸರಿನ ಯಂತ್ರ ಈ ಕಾರ್ಯವನ್ನು ಸಾಧಿಸಿತ್ತು. ಆದರೆ ಇದು ಸಹ ನೀರಿನ ಇನ್ನೊಂದು ಆಕರಕ್ಕೆ ಕೈಹಾಕುವ ದುಸ್ಸಾಹಸವಾಗಿದೆಯೇ ಹೊರತು ಜಲಸಂರಕ್ಷಣೆಯಾಗುವುದಿಲ್ಲ ಎಂದು ವಿಷಾದಿಸಿದರು. ಕಾರ್ಯಕ್ರಮದಲ್ಲಿ ನಿಮ್ಹಾನ್ಸ್ ಯುವ ಸ್ಪಂದನ ಕಾರ್ಯಕ್ರಮದ ರಾಜ್ಯ ಸಂಯೋಜಕರಾದ  ನಾಗರಾಜ ರಂಗಣ್ಣನವರ್ ಮಾತನಾಡಿ, ಯುವ ಸ್ಪಂದನ ಕಾರ್ಯಕ್ರಮದ ಪರಿಚಯ ಮಾಡಿಕೊಟ್ಟರು. ಕರಾವಿಪ ಕಾರ್ಯದರ್ಶಿಎಂ.ಗುರುಸಿದ್ಧಸ್ವಾಮಿ, ಜಿಲ್ಲಾ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕರಾದ ಎಸ್.ಬಿ.ಶಿಲ್ಪ ವಿವರಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ.ಪಿ.ಪ್ರೇಮ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶರಣ ಎಂ.ಬಿ.ಸAಗಮೇಶ್ವರಗೌಡ್ರು ವಹಿಸಿದರು.