ಶೇ.೧೦೦ ಮತದಾನಕ್ಕೆ ಮುಂದಾಗಿ-ಬಾಬು ರಾಠೋಡ್ ಸಲಹೆ
ದೇವದುರ್ಗ.ಮಾ.೨೩- ಮತದಾನವೇ ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದ್ದು ೧೮ವರ್ಷದ ತುಂಬಿದ ಪ್ರತಿಯೊಬ್ಬ ನಾಗರಿಕರು ತಪ್ಪದೆ ಮತದಾನ ಮಾಡುವ ಮೂಲಕ ಶೇ.೧೦೦ ವೋಟಿಂಗ್‌ಗೆ ಸಹಕಾರ ನೀಡಬೇಕು ಎಂದು ತಾಪಂ ಇಒ ಬಾಬು ರಾಠೋಡ್ ಹೇಳಿದರು.
ತಾಲೂಕಿನ ಖೇಣೇದ್ ಮುರಿಗೆಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೀವು ಮತದಾನ ಮಾಡುವ ಜತೆಗೆ ಮನೆಯಲ್ಲಿನ ಪಾಲಕರು, ಅಕ್ಕಪಕ್ಕದ ಮನೆಯವರು ಮತದಾನ ಮಾಡುವಂತೆ ಜಾಗೃತಿ ಮೂಡಿಸಬೇಕು. ಅಂದಾಗ ಮಾತ್ರ ಶೇ.೧೦೦ರಷ್ಟು ಮತದಾನ ಗುರಿ ಸಾಧಿಸಲು ಸಾಧ್ಯ.
ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಪ್ರಜೆಗಳು ಪ್ರಜಾಸತ್ತಾತ್ಮಕ ಮತ್ತು ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾ? ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದರು.
ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ್ ಕುಲಕರ್ಣಿ, ಬಿಇಒ ಎಚ್.ಸುಖದೇವ್, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಬಂದೋಲಿ ಸಾಬ್ ಹಾಗೂ ಉಪನ್ಯಾಸಕರು ಇದ್ದರು.