ದೆಹಲಿ ಮುಖ್ಯಮಂತ್ರಿ ಬಂಧನ ಖಂಡಿಸಿ ಆಮ್‌ಆದ್ಮಿ ಮತ್ತು ಕಾಂಗ್ರೆಸ್ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೩: ದೆಹಲಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದವು. ದಾವಣಗೆರೆಯ ಜಯದೇವ ವೃತ್ತದಲ್ಲಿ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳ ಕರ‍್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಆಡಳಿತ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿದವು.ಆಮ್ ಆದ್ಮಿ ಪಕ್ಷದ ಕೆ.ಎಸ್.ಶಿವಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ಸಿಬಿಐ, ಐಟಿ ಮತ್ತು ಇಡಿ ಎಂಬ ಸ್ವಾಯತ್ತ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳನ್ನು ದಮನ ಮಾಡಲು ಹೊರಡುವ ಮೂಲಕ ಸರ್ವಾಧಿಕಾರಿ ಧೋರಣೆ ಹೊಂದಿದೆ ಎಂದು ದೂರಿದರು.ನರೇಂದ್ರ ಮೋದಿಯವರು ಪ್ರಧಾನಿ ಆದ ನಂತರ ಇಂತಹ ಧೋರಣೆ ಹೊಂದಿದ್ದು, ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದರೆ ಅವರ ವಿರುದ್ದ ಸಿಬಿಐ ದಾಳಿ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ ಕೇಂದ್ರ ಸರ್ಕಾರ ನಿಜವಾಗಲೂ ತಪಿತಸ್ಥರನ್ನು ಬಂಧಿಸಿದ್ದರೆ ಬೇಲಿಕೇರಿ ಅದಿರು ನಾಪತ್ತೆ ಹಗರಣ ಮತ್ತು ಹವಾಲಾ ಪ್ರಕರಣದಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಜೈಲಿನಲ್ಲಿರಬೇಕಾಗಿರುತ್ತಿತ್ತು. ಆದರೆ ವಿರೋಧ ಪಕ್ಷಗಳನ್ನು ದಮನ ಮಾಡಬೇಕೆಂಬ ದೃಷ್ಠಿಯಿಂದ ವಿರೋಧ ಪಕ್ಷಗಳ ನಾಯಕರನ್ನು ಸುಖಾಸುಮ್ಮನೆ ಬಂಧಿಸಲಾಗುತ್ತಿದೆ ಎಂದು ದೂರಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರಾದ ಎ.ನಾಗರಾಜ್, ಚಮನ್ ಸಾಬ್, ಅಬ್ದುಲ್ ಲತೀಫ್, ಇಟ್ಟಿಗುಡಿ ಮಂಜುನಾಥ್, ಶುಭಮಂಗಳ, ಮೈನುದ್ದಿನ್, ಡೋಲಿ ಚಂದ್ರು, ಮೊಟ್ಟೆ ದಾದಾಪೀರ್, ಹರೀಶ್, ಆಮ್‌ಆದ್ಮಿ ಪಕ್ಷದ ಪದಾಧಿಕಾರಿಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದಿಲ್‌ಖಾನ್, ಚಂದ್ರು , ಜಿಲ್ಲಾ ಕಾರ್ಯದರ್ಶಿ ರವೀಂದ್ರ ಕೆ, ಸುರೇಶ್ ಸಿಡ್ಲಪ್ಪ, ಶಬ್ಬೀರ್ ಅಹಮದ್, ಮೊಹಮದ್ ಗೌಸ್, ಧರ್ಮನಾಯ್ಕ್, ವಕ್ತಾರರಾದ ಚಂದ್ರು, ಬಸವಂತಪ್ಪ, ಹರಿಹರ ತಾಲೂಕ್ ಪ್ರಧಾನ ಕಾರ್ಯದರ್ಶಿ ಮೊಹಮದ್ ಯುಸಫ್ ಪಾಲ್ಗೊಂಡಿದ್ದರು.