ಫಸಲ್ ಭೀಮಾ ಯೋಜನೆ ಅವ್ಯವಹಾರ ಖಂಡಿಸಿ ರೈತರ ಪ್ರತಿಭಟನೆ
ದೇವದುರ್ಗ.ಮಾ.೨೩- ತಾಲೂಕಿನ ಜಾಲಹಳ್ಳಿ ಹಾಗೂ ಗಾಣಧಾಳ ಗ್ರಾಮದಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತಗೆ ಬೆಳೆ ವಿಮೆ ನೀಡುವಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಜಾಲಹಳ್ಳಿ ನಾಡಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಾಲಹಳ್ಳಿ ಹಾಗೂ ಗಾಣಧಾಳ ಗ್ರಾಮಗಳ ಸುತ್ತಮುತ್ತಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರು ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಕಂತು ಕಟ್ಟಿದ್ದಾರೆ. ಆದರೆ, ಕೇವಲ ೬೨ ರೈತರಿಗೆ ಮಾತ್ರ ಬೆಳೆ ನ?ವಾಗಿದೆ ಎಂದು ಗುರುತಿಸಿ ವಿಮೆ ಜಮೆ ಮಾಡಿದ್ದಾರೆ. ಇದರಲ್ಲಿ ಸುಮಾರು ೧.೨೧ ಕೋಟಿ ರೂ. ಅವ್ಯವಹಾರ ನಡೆದಿದೆ. ಜಮೀನು ಇಲ್ಲದೇ ಇರುವ ವ್ಯಕ್ತಿಗಳು ಸೇರಿ ಕೆಲವು ಮಧ್ಯವರ್ತಿಗಳ ಮೂಲಕ ವಿಮೆ ಹಣ ತಮ್ಮ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ರೈತರು ಕ? ಕಾಲದಲ್ಲಿ ಬೆಳೆ ವಿಮೆ ಅನುಕೂಲವಾಗುತ್ತೆ ಎನ್ನುವ ಕಾರಣಕ್ಕೆ ಸಾಲಮಾಡಿ ಸಾವಿರಾರು ರೂ. ವಿಮೆ ಕಂತು ಕಟ್ಟಿದರು. ಆದರೆ, ಹಣ ದುರ್ಬಳಕೆಯಿಂದ ಅರ್ಹ ಕೃಷಿಕರಿಗೆ ಅನ್ಯಾಯವಾಗಿದೆ. ತಕ್ಷಣವೇ ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು. ಅರ್ಹ ರೈತರಿಗೆ ಬೆಳೆವಿಮೆ ತಕ್ಷಣವೇ ಖಾತೆಗೆ ಜಮಾಮಾಡಬೇಕು. ಮಾನ್ವಿ ತಾಲೂಕಿನ ಭೋಗಾವತಿಯಲ್ಲಿ ಫಸಲ್ ಬಿಮಾ ಯೋಜನೆ ಅವ್ಯವಹಾರದಲ್ಲಿ ಕೈಗೊಂಡು ಕ್ರಮ ಇಲ್ಲಿಯೂ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಮುಖಂಡ ಸಿದ್ದನಗೌಡ ಪಾಟೀಲ್, ಸಂಘಟನೆ ಜಿಲ್ಲಾ ಕಾರ್ಯದರ್ಶಿ ನರಸಣ್ಣ ನಾಯಕ, ಗ್ರಾಮ ಸಮಿತಿ ಅಧ್ಯಕ್ಷ ದುರಗಪ್ಪ ನಾಯಕ ಹೊರಟಿ, ಕಾರ್ಯದರ್ಶಿ ರಂಗನಾಥ ನಾಯಕ, ಹನುಮಂತಪ್ಪ ನಾಯಕ ಕುರಿಕಾರ, ಮೌನೇಶ ದಾಸರ್ ಇದ್ದರು.
ಅಧಿಕಾರಿಗಳ ಭೇಟಿ:
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಉಪತಹಸೀಲ್ದಾರ್ ವಿಕಾಸಕುಮಾರ ಕೊಳ್ಳೂರು, ಕೃಷಿ ಇಲಾಖೆ ವ್ಯವಸ್ಥಾಪಕ ಪ್ರವೀಣ್ ಕುಮಾರ ಭೇಟಿನೀಡಿ ರೈತರ ಮನವಿ ಸ್ವೀಕರಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.