ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ನೋಡಲ್ ಅಧಿಕಾರಿ ಗುಂಜನ್ ಕೃಷ್ಣ ಭೇಟಿ
ಸಂಜೆವಾಣಿ ವಾರ್ತೆ
ದಾವಣಗೆರೆ,ಮಾ.23; ಲೋಕಸಭಾ ಚುನಾವಣೆ ನಡೆಯುತ್ತಿದ್ದು ಚುನಾವಣಾ ಕಾರ್ಯಗಳ ವೀಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಾರ್ ರೂಂ ಸ್ಥಾಪಿಸಲಾಗಿದ್ದು ಶುಕ್ರವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿ ಜಿಲ್ಲಾ ನೋಡಲ್ ಅಧಿಕಾರಿಯಾದ ಗುಂಜನ್ ಕೃಷ್ಣ ಅವರು ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಾರ್ ರೂಂನಲ್ಲಿ ಎಲ್ಲಾ ವಿದ್ಯುನ್ಮಾನ ಮಾಧ್ಯಮಗಳ ವೀಕ್ಷಣೆಗಾಗಿ ಟಿ.ವಿ ಅಳವಡಿಕೆ, ಸ್ಥಳೀಯ ಲೋಕಲ್ ಚಾನೆಲ್‍ಗಳ ವೀಕ್ಷಣೆ, ಸಾಮಾಜಿಕ ಜಾಲತಾಣ ವೀಕ್ಷಣೆಗಾಗಿ ಮತ್ತು ಪ್ರತಿ ತಾಲ್ಲೂಕಿಗೆ ಚುನಾವಣಾ ಕಾರ್ಯಗಳ ವೀಕ್ಷಣಾ ವರದಿಗಾಗಿ ತಾಲ್ಲೂಕಿಗೊಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಾರ್ ರೂಂ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.ಮತದಾರರಿಗೆ ಸಹಾಯ; ಮತದಾರರಿಗೆ ಮಾಹಿತಿ ಹಾಗೂ ಸಹಾಯಕ್ಕಾಗಿ 1950 ಕರೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಸಂಖ್ಯೆಗೆ ದಿನ 24 ಗಂಟೆಯು ಕರೆ ಮಾಡಿ ಮಾಹಿತಿ ಮತ್ತು ಸಹಾಯ ಪಡೆಯಬಹುದಾಗಿದೆ. ಮತದಾರರು ವಿಹೆಚ್‍ಎ ಆಪ್ ಡೌನ್‍ಲೋಡ್ ಮಾಡಿಕೊಂಡು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆ ಮಾಡಿಕೊಳ್ಳಬಹುದು ಅಥವಾ 1950 ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.ಈ ವೇಳೆ ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್.ಬಳ್ಳಾರಿ, ಸ್ಮಾರ್ಟ್ ಸಿಟಿ ಎಂ.ಡಿ.ವೀರೇಶ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
                                           =======