ಗ್ರಾಹಕ ಸಂರಕ್ಷಣಾ ಹಕ್ಕುಗಳೊಂದಿಗೆ ಜವಾಬ್ದಾರಿಗಳ ಜಾಗೃತಿ ಮೂಡಿಸುವುದು ಅಗತ್ಯ
ಸಂಜೆವಾಣಿ ವಾರ್ತೆ
ದಾವಣಗೆರೆ; ಮಾ.23; ಸರಕು ಮತ್ತು ಸೇವೆಗಳ ಸೇವಾ ನ್ಯೂನ್ಯತೆ ವಿರುದ್ದ ರಕ್ಷಣೆ ಪಡೆಯುವ ಹಕ್ಕುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸಲು ಸರಕು ಮತ್ತು ಸೇವೆಯ ಗುಣಮಟ್ಟ, ಪ್ರಮಾಣ ಮತ್ತು ದರ ಕುರಿತು ಪ್ರಶ್ನಿಸಲು ಪ್ರತಿಯೊಬ್ಬ ಗ್ರಾಹಕರು ಸಂರಕ್ಷಣಾ ಹಕ್ಕುಗಳ ಬಗ್ಗೆ ತಿಳಿಯಬೇಕು ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.ಅವರು  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವಾಣಿಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ, ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜ್, ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.ಗ್ರಾಹಕರಿಗೆ ಸರಕು, ಸೇವೆಗಳ ಬಗ್ಗೆ ಜಾಗೃತಿ ಇರಬೇಕು.  ಗ್ರಾಹಕರು ಸರಕುಗಳನ್ನು ಒದಗಿಸುವ ಮಾರಾಟಗಾರ ಬಳಿ ಬಂದಾಗ ಆಯಾ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕು ಹೊಂದಿರುತ್ತಾನೆ. ವ್ಯಾಪಾರದಾರರಿಂದ ಗ್ರಾಹಕರಿಗೆ ಒದಗಿಸಿದ ಸರಕುಗಳು ಗುಣಮಟ್ಟಕ್ಕೆ ಅನುಗುಣವಾಗಿಲ್ಲದಿದ್ದರೆ, ಖರೀದಿಸಿದ ವಸ್ತುಗಳ ಸಂಪೂರ್ಣ ದಾಖಲೆಗಳನ್ನಿಟ್ಟುಕೊಂಡು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ. ಯಾವುದೇ ವಸ್ತುಗಳು ಕಳಪೆಯಿಂದ ಕೂಡಿವೆ, ಸೇವಾ ನ್ಯೂನ್ಯತೆ ಹೊಂದಿದೆ ಎಂದಲ್ಲಿ ಅದನ್ನು ಗ್ರಾಹಕರ ನ್ಯಾಯಾಲದಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬ ಗ್ರಾಹಕರು ಬೆಳೆಸಿಕೊಳ್ಳಬೇಕು.ಯಾವುದೇ ವಸ್ತುಗಳನ್ನು ಖರೀದಿಸಿ ಅದಕ್ಕೆ ಸಂಬಂಧಿಸಿದ ಬಿಲ್‍ನ್ನು ಪಡೆದುಕೊಳ್ಳಬೇಕು. ಬಿಲ್ ಪಡೆದಾಗ ಮಾತ್ರ ನಾವು ಕಳಪೆ, ಸೇವಾ ನ್ಯೂನ್ಯತೆಯ ವಿರುದ್ದ ಹೋರಾಟ ಮಾಡಿ ಅದರಿಂದಾದ ನಷ್ಟಕ್ಕೆ ಪರಿಹಾರ ಪಡೆದುಕೊಳ್ಳÀಬಹುದಾಗಿದೆ ಎಂದರು.ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಾಂತೇಶ್ ಈರಪ್ಪ ಶಿಗ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ. ಗ್ರಾಹಕರಿಗೆ ನ್ಯಾಯಯುತ, ಯೋಗ್ಯ ಹಾಗೂ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನೀಡುವ ಜವಾಬ್ದಾರಿ ವ್ಯಾಪಾರಸ್ಥರದ್ದು, ಯಾವುದೇ ವಸ್ತುಗಳನ್ನು ಕೊಡುವವನ ತೃಪ್ತಿಗಾಗಿ ಕೊಳ್ಳುವುದಲ್ಲ. ಅಲ್ಲಿ ಗ್ರಾಹಕರ ಸಂತೃಪ್ತಿಯೇ ಮುಖ್ಯ, ಸುರಕ್ಷತೆ, ಆಯ್ಕೆ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದುವ ಹಕ್ಕನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆಯು ಎಲ್ಲ ಗ್ರಾಹಕರಿಗೂ ನೀಡಿದೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕೆರೆಣ್ಣ ಮಾತನಾಡಿ ವ್ಯಾಪಾರಸ್ಥರು ವಸ್ತುಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರ ಪಡೆಯುವಂತಿಲ್ಲ. ವಸ್ತುಗಳು ದೋಷದಿಂದ ಕೂಡಿದ್ದರೆ ಪ್ರಶ್ನೆ ಮಾಡುವ ಹಕ್ಕು ಗ್ರಾಹಕರಿಗಿದೆ. ಅವಧಿ ಮೀರಿದ ಉತ್ಪನ್ನಗಳನ್ನು ನೀಡಿದರೆ ಅಂತಹವರ ಮೇಲೆ ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿಯಬೇಕು ಎಂದರು.ಆಹಾರ ಇಲಾಖೆ ಉಪ ನಿರ್ದೇಶಕ ಸಿದ್ದರಾಮ್ ಮಾರಿಹಾಳ್ ಸ್ವಾಗತಿಸಿದರು. ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕರಾದ ಮೊಹಮದ್ ರಫೀ ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವಾಣಿಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸಿ ಎಸ್ ತ್ಯಾಗರಾಜನ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯರಾದ ಬಿ.ವಿ ಗೀತಾ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲರಾದ ಡಾ;ಡಿ.ಪಿ.ನಾಗರಾಜಪ್ಪ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ಡೀನ್ ಮಂಜನಾಯಕ್ ಎನ್, ಡಿ ಸಿ ಐ ಸಿ ಅಧ್ಯಕ್ಷರಾದ ಅನಿತಾ ಹೆಚ್, ಆಹಾರ ಇಲಾಖೆಯ ಸಹ ನಿರ್ದೇಶಕ ಶಿವಾಜಿ ಟಿ, ಆಹಾರ ನಿರೀಕ್ಷಕರು ಮಂಜುನಾಥ ಇನ್ನಿತರರು ಉಪಸ್ಥಿತರಿದ್ದರು