ನಕಲಿ ಪತ್ರಕರ್ತರ ಹಾವಳಿ ತಡೆಗೆ ಮನವಿ
ಚನ್ನಮ್ಮನ ಕಿತ್ತೂರ,ಮಾ23: ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘ ತಾಲೂಕಾ ಘಟಕದ ವತಿಯಿಂದ ತಹಶೀಲ್ದಾರ ರವೀಂದ್ರ ಹಾದಿಮನಿ ಮತ್ತು ಪೋಲಿಸ್ ವೃತ್ತ ನಿರೀಕ್ಷಕ (ಸಿಪಿಐ) ಮಲಕಾಜಪ್ಪ ದಪ್ಪಿನ ಇವರುಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನಲ್ಲಿ ನಕಲಿ ಪತ್ರಕರ್ತರು ಹೆಚ್ಚಾಗಿದ್ದು ಸರ್ಕಾರಿ ಅಧಿಕಾರಿಗಳಿಗೆ ಹಾಗೂ ವ್ಯಾಪಾರಸ್ಥರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಆಡಳಿತ ಮಂಡಳಿಗೆ ತಲೆನೋವಾಗಿದ್ದಾರೆ. ನಕಲಿ ಗುರುತಿ ಚೀಟಿ ಹಿಡಿದುಕೊಂಡು ನಾವು ಪತ್ರಕರ್ತರೆಂದು ಹೇಳಿಕೊಂಡು ಹಣ ವಸೂಲಿಗಾಗಿ ಬೇಡಿಕೆಯಿಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಇಂತಹ ಪ್ರಕರಣಗಳ ಸಲುವಾಗಿ ಎಷ್ಟೋ ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕುರಿತು ಈಗಾಗಲೇ ಸಾಕಷ್ಟು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಸ್ಥರು, ಕಾರ್ಯನಿರತ ಪತ್ರಕರ್ತರ ಸಂಘದ ಗಮನ ಸೆಳೆದಿದ್ದಾರೆ.
ಕೆಲವರು ಪತ್ರಕರ್ತರ ವೇಷದಲ್ಲಿ ಕೊರಳಿನಲ್ಲಿ ನಕಲಿ ಗುರುತಿನ ಚೀಟಿ ಧರಿಸಿ ವಾಹನದ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಸಂಚರಿಸಿ ವಾಹನ ಚಾಲಕರಿಗೆ ಬೆದರಿಸಿ ವಾಹನ ತಪಾಸಣೆ, ಮೊಬೈಲ್ ಮೂಲಕ ಚಿತ್ರೀಕರಣ ಮಾಡಿ ದುಡ್ಡಿಗೆ ಬೇಡಿಕೆಯಿಟ್ಟ ಆರೋಪವು ಕೇಳಿ ಬಂದಿವೆ. ಇಂತಹ ನಕಲಿ ಪತ್ರಕರ್ತರನ್ನು ಬಂಧಿಸುವಂತೆ ತಹಶೀಲ್ದಾರ ಮತ್ತು ಸಿಪಿಐ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ತಹಶೀಲ್ದಾರ ಹಾಗೂ ಸಿಪಿಐ ಮಾತನಾಡಿ ಪತ್ರಕರ್ತರೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿರುವವರ ವಿವರ ನೀಡಿದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಈರಣ್ಣಾ ಬಣಜಿಗ, ಉಪಾಧ್ಯಕ್ಷ ಸೋಮಶೇಖರ ಕುಪ್ಪಸಗೌಡರ, ಕಾರ್ಯದರ್ಶಿ ನಾಗರಾಜ ಜೋರಾಪೂರ, ಖಜಾಂಚಿ ಶೇಖರ ಕಲ್ಲೂರ, ಪ್ರದೀಪ ಮೇಲಿಮನಿ, ಕಲ್ಲಪ್ಪ ದೇಗಲೋಳ್ಳಿ(ಅಗಸಿಮನಿ), ಉಳವಯ್ಯಾ ಹಿರೇಮಠ, ಶಿವಾನಂದ ವಿಭೂತಿಮಠ, ಉಪಸ್ಥಿತರಿದ್ದರು.