ಬೀದಿ ಬದಿಯ ವ್ಯಾಪಾರಿಗಳಿಗೆ ಛತ್ರಿಗಳ ವಿತರಣೆ
ಸಂಜೆವಾಣಿ ವಾರ್ತೆ
ಸಂಡೂರು: ಮಾ:23 : ಸಂಡೂರು: ಬೀದಿ ವ್ಯಾಪಾರಿಗಳು ಎಂದರೆ ಕಷ್ಟಪಟ್ಟು ಮಳೆ, ಬಿಸಿಲು, ಲೆಕ್ಕಿಸದೆ ಉದರ ತುಂಬಿಕೊಳ್ಳುವ ಕಾರ್ಯವನ್ನು ಕಷ್ಟಪಟ್ಟು ಮಾಡುತ್ತಿದ್ದಾರೆ ಅಂತಹ ಬಡ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎನ್ನುವ ಮಹತ್ತರ ಉದ್ದೇಶದಿಂದ ಅಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ನೆರಳಿನ ದೊಡ್ಡ ಛತ್ರಿಗಳನ್ನು ವಿತರಿಸುತ್ತಿರುವುದು ಬಹು ಉತ್ತಮವಾದ ಕಾರ್ಯವಾಗಿದೆ ಎಂದು ಅಮ್ಮಾ ಸಂಸ್ಥೆಯ ಅಧ್ಯಕ್ಷೆ ಎಂ.ಕವಿತಾ ರುದ್ರಗೌಡ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಹಾಗೂ ಸುತ್ತಲಿನ ಬೀದಿಬದಿ ವ್ಯಾಪಾರಿಗಳಿಗೆ ದೊಡ್ಡ ನೆರಳಿನ ಛತ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಛತ್ರಿಗಳನ್ನು ವಿತರಿಸಿ ಮಾತನಾಡಿ ಬಿರು ಬಿಸಿಲಿನಲ್ಲಿ ಮನೆ ಬಿಟ್ಟು ಹೊರ ಬರುವುದೇ ಕಷ್ಟ ಸಾಧ್ಯ ಅದರೆ ಕಾಯಕ ಮಾಡದೇ ಇದ್ದಲ್ಲಿ ಆಹಾರ ಇಲ್ಲ ಎನ್ನುವ ಬಡ ಬೀದಿಬದಿ ವ್ಯಾಪಾರಿಗಳು ಅನಿವಾರ್ಯವಾಗಿ ಈ ಕಾರ್ಯ ಮಾಡಲೇ ಬೇಕು ಅದಕ್ಕಾಗಿ ಅವರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಅಮ್ಮ ಸಂಸ್ಥೆ ಇಂತಹ ಕಾರ್ಯವನ್ನು ಮಾಡುತ್ತಿದ್ದು ಸಾರ್ವಜನಿಕರು ಅದರ ಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು, ಅಲ್ಲದೆ ಇಂತಹ ಸೇವಾ ಕಾರ್ಯಗಳನ್ನು ನಿರ್ವಹಿಸುವಂತಹ ಇನ್ನೂ ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸದಸ್ಯ ಎಂ. ಮಣಿಕಂಠ ಅವರು ಒಟ್ಟು 13 ಬೀದಿ ಬದಿ ವ್ಯಾಪಾರಿಗಳಿಗೆ ದೊಡ್ಡ ಛತ್ರಿಗಳನ್ನು ವಿತರಿಸಿದರು, ಈ ಸಂದರ್ಭದಲ್ಲಿಪ್ರಧಾನ ಕಾರ್ಯದರ್ಶಿ ಎಂ. ರುದ್ರಗೌಡ ಅವರೂ ಸಹ ಮಾತನಾಡಿ ಸುತ್ತಲಿನ ಗ್ರಾಮಗಳಿಂದ ಬರುವ ಈ ತಳ್ಳುಗಾಡಿ, ನೆಲದ ಮೇಲೆ ಕುಳಿತು ಹಣ್ಣು, ತರಕಾರಿ, ಬಿಂದಿಗೆ ಇತರ ವಸ್ತುಗಳನ್ನು ಮಾರುವ ಇವರ ಬದುಕು ಬಿಸಿಲಿಗೆ ಕಮರದಿರಲಿ ಎನ್ನುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಲಾಗಿದ್ದು ಎಲ್ಲರೂ ಸಹಕಾರ ನೀಡಿದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳ ವ್ಯವಸ್ಥೆಗೆ ಸಿದ್ದತೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ಸಹಾಯಕ ವೃತ್ತ ನೀರೀಕ್ಷ ಸಣ್ಣ ವೀರೇಶ್, ಇತರರು ಸೇರಿ ವಿತರಿಸಿದರು.