ದುರ್ಬಲ ಸಿಎಂ ಹೇಳಿಕೆ ಮುಂದುವರೆದರೆ ಪ್ರತಿಭಟನೆ ಎಚ್ವರಿಕೆ-ಎಂ.ಕೆ. ಸೋಮಶೇಖರ್
ಸಂಜೆವಾಣಿ ನ್ಯೂಸ್
ಮೈಸೂರು:ಮಾ.23:- ವಿರೋಧ ಪಕ್ಷದ ನಾಯಕ ಅಶೋಕ್ ಹಾಗೂ ಮಾಜಿ ಸಚಿವ ಅಶ್ವತ್ಥ ನಾರಾಯಣ್ ಅವರು ಪದೇ ಪದೇ ಸಿಎಂ ಸಿದ್ದರಾಮಯ್ಯ ಅವರು ದುರ್ಬಲ ಮುಖ್ಯಮಂತ್ರಿ ಎಂದು ಟೀಕಿಸುತ್ತಿದ್ದಾರೆ. ಇದನ್ನು ಮುಂದುವರಿಸಿದಲ್ಲಿ ಈ ಇಬ್ಬರು ನಗರಕ್ಕೆ ಭೇಟಿ ನೀಡಿದ ವೇಳೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಎಚ್ಚರಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಸಿದ್ದರಾಮಯ್ಯ ಅವರು ಪ್ರಬಲ ರಾಜಕೀಯ ನಾಯಕರಾಗಿದ್ದಾರೆ. ಈ ರೀತಿ ಇಲ್ಲದೇ ಹೋಗಿದ್ದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ದೊರಕಿಸಿಕೊಡಲು ಸಾಧ್ಯವಾಗುತ್ತಿತ್ತೆ ಎಂದು ಪ್ರಶ್ನಿಸಿದರು.
ಜೊತೆಗೆ, ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ನೀಡಿದ್ದ ಗ್ಯಾರೆಂಟಿ ಜಾರಿ ಭರವಸೆಯನ್ನು ಬಿಜೆಪಿ ಹಾಗೂ ಅದರ ಮುಖಂಡರು ಟೀಕಿಸಿದ್ದರು. ಇದರ ಜಾರಿ ಸಾಧ್ಯವಿಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಅವರು ಅವನ್ನು ಜಾರಿಗೊಳಿಸಿದ್ದಾರೆ. ಗ್ಯಾರೆಂಟಿಗಳಿಂದಾಗಿ ರಾಜ್ಯ ದಿವಾಳಿಯಾಗುತ್ತದೆ ಎಂಬ ಟೀಕೆಗೆ ಪ್ರತಿಯಾಗಿ ಈ ಬಾರಿ ಇಡೀ ದೇಶವೇ ಮೆಚ್ಚುವಂತಹ ಬಜೆಟ್ ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಬಳಿಕ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ಬಲಿಷ್ಠರಾಗಿರುವ ಕಾರಣದಿಂದಲೇ ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ಕೇವಲ ಭ್ರಮೆ ಸೃಷ್ಟಿಸಲೆಂದಷ್ಟೇ ಬಿಜೆಪಿಯವರು ನಾಲ್ಕು ಜನರನ್ನು ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸುತ್ತಿದ್ದಾರೆಂದು ಲೇವಡಿ ಮಾಡಿದರು.
ಶ್ರೀಧರ್, ಜಿ. ಸೋಮಶೇಖರ್ ಹಾಗೂ ಇನ್ನಿತರರು ಇದ್ದರು.