ಎಸ್‍ಎಸ್‍ಎಲ್‍ಸಿ ಹೆಚ್ಚಳಕ್ಕೆ ಕ್ರಮ: ಡಿಡಿಪಿಐ ಎಚ್.ಕೆ.ಪಾಂಡು
ಸಂಜೆವಾಣಿ ನ್ಯೂಸ್
ಮೈಸೂರು:ಮಾ.23:-ಜಿಲ್ಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಗಮವಾಗಿ ನಡೆದು, ಜಿಲ್ಲೆಯ ಫಲಿತಾಂಶ ಮಟ್ಟವನ್ನು ಮೇಲು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ ಎಂದು ಪ್ರೌಢಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಚ್.ಕೆ.ಪಾಂಡು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಎಲ್ಲ ಕ್ರಮ ಇಲಾಖೆ ಕೈಗೊಂಡಿದೆ. ಹೀಗಾಗಿ ಮೊದಲನೇ ದಿನ ಬೆಳಗ್ಗೆ ಒಂಭತ್ತಕ್ಕೆಲ್ಲ ಪರೀಕ್ಷಾ ಕೊಠಡಿಗೆ ಹಾಜರಾಗಿ ಆತಂಕ ದೂರ ಮಾಡಿಕೊಳ್ಳಲು ತಿಳಿಸಲಾಗಿದೆ. ಇನ್ನು, ವಿದ್ಯಾರ್ಥಿಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವ ನಿಟ್ಟಿನಲ್ಲಿ ಎಲ್ಲರೂ ಶಾಲಾ ಸಮವಸ್ತ್ರ ಧರಿಸಿರಬೇಕು. ಮೊಬೈಲ್, ಸ್ಮಾಟ್ರ್ವಾಚ್ ಮೊದಲಾದವನ್ನು ನಿರ್ಬಂಧಿಸಲಾಗಿದೆ ಎಂದು ವಿವರಿಸಿದರು.
ಬಳಿಕ, ನಗರದಲ್ಲಿ 35, ಗ್ರಾಮೀಣ ಪ್ರದೇಶದಲ್ಲಿ 97 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 132 ಪರೀಕ್ಷಾ ಕೇಂದ್ರಗಳಿವೆ. ಇವುಗಳಲ್ಲಿ ಎಲ್ಲ ರೀತಿಯ ವಿದ್ಯಾರ್ಥಿಗಳು ಸೇರಿದಂತೆ 40,333 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಇವರಲ್ಲಿ 20,046 ಮಂದಿ ಪುರುಷರು, 20,287 ಮಹಿಳೆಯರು, ಮಕ್ಕಳು ಸೇರಿದ್ದಾರೆಂದರು. ಇನ್ನು, ಮಾ. 25 ರ ಸೋಮವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಪ್ರಥಮ ಭಾಷೆ, 27 ರ ಬುಧವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಸಮಾಜ ವಿಜ್ಞಾನ, 30 ರ ಶನಿವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ವಿಜ್ಞಾನ, ಏಪ್ರಿಲ್ ಎರಡರ ಮಂಗಳವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಗಣಿತ, ಏಪ್ರಿಲ್ ಮೂರರ ಬುಧವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಆಯ್ದ ಕೇಂದ್ರಗಳಲ್ಲಿ ಪರ್ಯಾಯ ವಿಷಯ, ಏ. ನಾಲ್ಕರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.15 ರವರೆಗೆ ತೃತೀಯ ಭಾಷೆ, ಏಪ್ರಿಲ್ ಆರರ ಶನಿವಾರ ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.15 ರವರೆಗೆ ದ್ವಿತೀಯ ಭಾಷೆ ಪರೀಕ್ಷೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಪರೀಕ್ಷೆ ಸುಗಮವಾಗಿ ನಡೆಯುವಂತೆ, ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಅಡಿಯಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಹಾ ಯಾವುದೇ ಭಯ, ಇಲ್ಲದೇ ನಿರ್ಭೀತಿಯಿಂದ, ಸಂತಸ, ಉತ್ಸಾಹರಿಂದ ಪರೀಕ್ಷೆ ಬರೆಯುವಂತೆ ಸಲಹೆ ನೀಡಿದರು. ಇಲಾಖೆ ಅಧಿಕಾರಿಗಳಾದ ವಿರೂಪಾಕ್ಷಿ, ಶಿವಮೂರ್ತಿ, ದೇವರಾಜು, ಕೆಂಪರಾಜು, ಪುಷ್ಪ ಹಾಗೂ ಇನ್ನಿತರರು ಹಾಜರಿದ್ದರು.