ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಾಗಲಿದೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.23: ಮಾನವನ ದೈನಂದಿನ ಕಾರ್ಯಗಳಿಗೆ ನೀರು ಸಿಗುತ್ತಿಲ್ಲ ಎಂಬ ಪರಿಸ್ಥಿತಿಯನ್ನು ಊಹಿಸುವುದೂ ಕಷ್ಟವಾಗಿರುವ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ನೀರಿಗೆ ಹಾಹಾಕಾರ ಎದುರಿಸಬೇಕಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮು ತಿಳಿಸಿದರು.
ಅವರು ಪಟ್ಟಣದ ಕೆಪಿಎಸ್ ಶಾಲಾ ಆವರಣದಲ್ಲಿ ವಿಶ್ವ ಜಲದ ದಿನದ ಅಂಗವಾಗಿ ಸಸಿಯನ್ನು ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರು ಜಗತ್ತಿನ ಅತ್ಯಮೂಲ್ಯ ವಸ್ತುಗಳಲ್ಲಿ ಒಂದು. ಪ್ರಪಂಚದಲ್ಲಿನ ಸಕಲ ಜೀವಿಗಳಿಗೂ ನೀರು ಬೇಕೇ ಬೇಕು. ಆ ಕಾರಣಕ್ಕೆ ನೀರನ್ನು ಜೀವಜಲ ಎಂದು ಕರೆಯುತ್ತೇವೆ. ಮನುಷ್ಯ ಕೂಡ ನೀರಿಲ್ಲದೆ ಒಂದು ದಿನ ಕೂಡ ಕಳೆಯಲಾರ. ಆದರೆ ಇದೀಗ ಅಂಥಹದ್ದೇ ಪರಿಸ್ಥಿತಿ ಎದುರಾಗಿದೆ. ಕುಡಿಯಲೂ ಕೂಡ ನೀರಿಲ್ಲದೆ ಮನುಷ್ಯರು ಹೈರಾಣಾಗುತ್ತಿದ್ದಾರೆ. ಅಂತರ್ಜಲ ಬತ್ತಿ ಹೋಗುತ್ತಿದೆ. ಭೂಮಿ ಬರಡಾಗುವತ್ತ ಸಾಗುತ್ತಿದೆ. ಮರ, ಗಿಡಗಳ ನಿರಂತರ ನಾಶ ಮುಂತಾದುವುಗಳು ಮಳೆ ಕೊರತೆಯಾಗುವಂತೆ ಮಾಡಿದೆ. ಅತಿಯಾದ ಕೈಗಾರಿಕೀಕರಣವು ಪ್ರಕೃತಿ ಮೂಲಗಳನ್ನ ನಾಶ ಮಾಡುತ್ತಿದೆ. ಇದೆಲ್ಲದರ ಪರಿಣಾಮದಿಂದ ಮಳೆ ಕೊರತೆ ಉಂಟಾಗಿ ನೀರು ಮರೀಚಿಕೆಯಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಅನಿತ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.