ಬುಡಕಟ್ಟು ಸಮುದಾಯದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಶೇಷ ಪುನಶ್ಚೇತನ ಶಿಬಿರದಲ್ಲಿ ತರಬೇತಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.23- ಶಾಲೆ ತೊರೆದ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತರಬೇತಿ ಪಡೆಯಲು ಆಯೋಜಿಸಿದ್ದ ವಿಶೇಷ ಪುನಶ್ಚೇತನ ಶಿಬಿರದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಇತರೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಶುಭಕೋರಿ ಬೀಳ್ಕೊಡುಗೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇನ್ನಿತರ ನೆರವಿನಿಂದ ಮೂರು ತಿಂಗಳಿಗೂ ಹೆಚ್ಚು ಕಾಲ ತಾಲೂಕಿನ ಹರದನಹಳ್ಳಿಯ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಶಾಲೆ ಬಿಟ್ಟ ಬುಡಕಟ್ಟು ಸಮುದಾಯದ 30 ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಜ್ಜುಗೊಳಿಸಲು ವಿಶೇಷ ಶಿಬಿರ ಆಯೋಜನೆ ಮಾಡಲಾಗಿತ್ತು.
ಊಟ, ವಸತಿ ಸಹಿತ ಶಿಬಿರದಲ್ಲಿ 15 ಮಂದಿ ಶಿಕ್ಷಕರು ವಿವಿಧ ವಿಷಯಗಳನ್ನು ಬೋಧಿಸಿ ಬುಡಕಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಹಾಜರಾಗಲು ಸಿದ್ದಪಡಿಸಿದ್ದಾರೆ. ಜಿಲ್ಲಾಧಿಕಾರಿ ಶಿಲ್ಪಾ ನಾಗ್‍ಅವರ ವಿಶೇಷ ಕಾಳಜಿಯಿಂದಾಗಿ ಶಾಲೆ ತೊರೆದ ಬುಡಕಟ್ಟು ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ಏರ್ಪಾಡಾಗಿತ್ತು.
ವಿಶೇಷ ಕಲಿಕಾ ಪುನಶ್ಚೇತನ ಶಿಬಿರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ, ಇನ್ನಿತರರು ಭೇಟಿ ನೀಡಿ ಪರೀಕ್ಷೆ ಬರೆಯುತ್ತಿರುವ ಬುಡಕಟ್ಟು ವಿದ್ಯಾರ್ಥಿಗಳಿಗೆ ಶುಭಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯಾವುದೇ ಭಯ ಪಡದೆ ಆತ್ಮ ವಿಶ್ವಾಸದಿಂದ ಪರೀಕ್ಷೆ ಬರೆಯಿರಿ. ಎಸ್.ಎಸ್.ಎಲ್.ಸಿ ನಂತರವೂ ಮುಂದಿನ ಶಿಕ್ಷಣಕ್ಕೆ ಎಲ್ಲಾ ಉತ್ತೇಜನ ನೀಡಲಾಗುತ್ತದೆ. ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಎಲ್ಲಾಯಶಸ್ಸು ನಿಮಗೆ ದೊರೆಯಲಿ ಎಂದು ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಆತ್ಮಸ್ತೈರ್ಯದಿಂದ ಪ್ರಯತ್ನ ಪಡಬೇಕು. ಸೋಲಿನ ಬಗ್ಗೆ ಹೆದರದೆ ಗೆಲುವಿನ ಬಗ್ಗೆ ಯೋಚಿಸಬೇಕು. ಶಿಕ್ಷಣದಲ್ಲಿ ಮುಂದೆ ಬರಬೇಕೆಂಬ ಪ್ರಯತ್ನ ಯಶಸ್ಸುಗೊಳ್ಳಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ ಶುಭಕೋರಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರ ರಾಜೇಅರಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ರೋಟರಿ ಪಂಚಶೀಲ ಸಂಸ್ಥೆಯಕಿರಣ್ ರಾಬರ್ಟ್, ಬೆಂಜಮಿನ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.