ಪಕ್ಷ ಸಂಘಟನೆಯಲ್ಲಿ ಬೀದರ್ ಮೊದಲ ಸ್ಥಾನ:ಸೋಮನಾಥ ಪಾಟೀಲ್
ಸಂಜೆವಾಣಿ ವಾರ್ತೆ
ಹುಮನಾಬಾದ್ :ಮಾ.23: ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಬೀದರ್ ಜಿಲ್ಲೆ ಮೊದಲ ಸ್ಥಾನದಲ್ಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದರು.
ತಾಲೂಕಿನ ಗಡವಂತಿ ಗ್ರಾಮದ ಖಾಸಗಿ ಸಭಾ ಮಂಟಪದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹುಮನಾಬಾದ್ ಪಟ್ಟಣ ಸೇರಿದಂತೆ ಬೀದರ್ ಜಿಲ್ಲೆಯ ಬಹುತೇಕ ಮುಖಂಡು ಟಿಕೆಟ್ ಆಕಾಕ್ಷಿಗಳಾಗಿದ್ದರೂ. ಟಿಕೆಟ್ ಘೋಷಣೆ ನಂತರ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರು.
ಬೀದರ್ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಚಿವ ಭಗವಂತ ಖೂಬಾ ಶ್ರಮಿಸಿದ್ದಾರೆ. ಜತೆಗೆ ಸರಕಾರದ ವಿವಿಧ ಯೋಜನೆಗಳು ಬಡವರ ಮನೆ ಬಾಗಿಲಿಗೆ ಮುಟ್ಟಿಸುವಂತ ಕಾರ್ಯ ಮಾಡಿದ್ದಾರೆ. ಈ ಹಿನ್ನಲೆ ಬೀದರ್ ಕ್ಷೇತ್ರದಲ್ಲಿ 3ನೇ ಬಾರಿಗೆ ಸಚಿವ ಭಗವಂತ ಖೂಬಾ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಈ ಪತ್ರಿಕಾಗೋಷ್ಠಿಯಲ್ಲಿ ಕೇವಲ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಒಬ್ಬರೇ ಚುನಾವಣೆ ಪ್ರಚಾರ ಕುರಿತು ಮಾತನಾಡಿದರು.
ಸುದ್ದಿಗಾರರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಜಿಲ್ಲಾಧ್ಯಕ್ಷ ಪಾಟೀಲ್ ಉತ್ತರಿಸಿದರು. ಬಿಜೆಪಿ ಅಭ್ಯರ್ಥಿಯಾದ ಸಚಿವ ಭಗವಂತ ಖೂಬಾ ತಮ್ಮ ಸಾಧನೆ, ಪಕ್ಷದ ಸಂಘಟನೆ ಹಾಗೂ ಸರಕಾರದ ಸಾಧನೆ ಕುರಿತು ಯಾವುದೇ ಮಾತನಾಡದೇ ಮೌನ ವಹಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ. ಸಿದ್ದು ಪಾಟೀಲ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ವಿಧಾನ ಪತಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಮಂಡಲ್ ಅಧ್ಯಕ್ಷ ಪ್ರಭಾಕರ ನಾಗರಾಳೆ, ಅಶೋಕ ಹೊಕ್ರಾಣಿ, ಮಾರುತಿರಾವ ಮೂಳೆ ಇದ್ದರು.