ಅಪೂರ್ಣ ರಸ್ತೆ ಕಾಮಗಾರಿ : ಮತದಾನ ಬಹಿಷ್ಕಾರಕ್ಕೆ ಗ್ರಾಮಸ್ಥರ ನಿರ್ಧಾರವರ್ಷ ಕಳೆಯುತ್ತಾ ಬಂದರೂ ಸಂಚಾರಕ್ಕೆ ಮುಕ್ತವಾಗದ ಐಗಳಿ – ಬಡಚಿ ರಸ್ತೆ
ಅಥಣಿ: ಮಾ.23:ತಾಲೂಕಿನ ಐಗಳಿ ಗ್ರಾಮದಿಂದ ಬಡಚಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ಆರಂಭಗೊಂಡು ವರ್ಷ ಕಳೆಯುತ್ತಾ ಬಂದರೂ ಇನ್ನೂ ಪೂರ್ಣಗೊಂಡಿಲ್ಲ, ಆಮೆಗತಿಯಲ್ಲಿ ಮತ್ತು ತೀರಾ ಕಳಪೆ ಮಟ್ಟದಿಂದ ನಿರ್ಮಾಣ ಮಾಡುತ್ತಿರುವ ಈ ರಸ್ತೆಯನ್ನು ಬೇಗನೆ ಅಭಿವೃದ್ಧಿಗೊಳಿಸುವುದರ ಜೊತೆಗೆ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕು. ತಾಲೂಕಾ ಆಡಳಿತ ನಿರ್ಲಕ್ಷ್ಯ ಧೋರಣೆ ತೋರಿದರೆ ಬರುವ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸುವದಾಗಿ ಐಗಳಿ ಗ್ರಾಮ ಪಂಚಾಯತ ಮಾಜಿ ಸದಸ್ಯ ದೇವೇಂದ್ರ ಬೆಳಗಲಿ ಹೇಳಿದರು.
ಅವರು ಐಗಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಒಂದು ವರ್ಷಗಳ ಹಿಂದೆ ಅಂದರೆ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಅಂದು ವಿಧಾನ ಪರಿಷತ್ ಸದಸ್ಯರಾಗಿದ್ದ ಇಂದಿನ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ಈ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ ಈ ರಸ್ತೆ ಕಾಮಗಾರಿಯನ್ನ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷತನದಿಂದ ಈ ಕಾಮಗಾರಿ ಇನ್ನುವರೆಗೆ ಪೂರ್ಣಗೊಳ್ಳದೆ ಆಮೆಯ ಗತಿಯಲ್ಲಿ ಕುಂಟುತ್ತಾ ಸಾಗಿದೆ. ಈ ರಸ್ತೆಯನ್ನ ಅಲ್ಲಲ್ಲಿ ಅಗೆದು ಜೆಲ್ಲಿ ಕಲ್ಲು ಹಾಕಿ ಒಂದಿಷ್ಟು ಗರಸ, ಮಣ್ಣು ಹಾಕಿದ ಸಮಾಧಾನ ಬಿಟ್ಟರೆ ಉಳಿದ ಕಾಮಗಾರಿ ಇನ್ನೂ ಅಪೂರ್ಣವಾಗಿದೆ ಎಂದು ಆರೋಪಿಸಿದರು.
ಐಗಳಿ ಗ್ರಾಮದಿಂದ ಬಡಚಿ ಗ್ರಾಮದವರೆಗಿನ ಈ ರಸ್ತೆಗೆ ಮಹಾವೀರ ತೋಟ, ಭಜಂತ್ರಿ ವಸ್ತಿ, ಯಲ್ಲಡಗಿ ಗ್ರಾಮದ ಬೋಸ್ಲೆವಾಡಿ, ದಾಸರ ವಸತಿ ತೋಟದ ಸಂಪರ್ಕ ಹೊಂದಿರುವ 15 ಕಿ. ಮೀ ದೂರದ ಈ ರಸ್ತೆಯಿಂದಲೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಐಗಳಿ ಗ್ರಾಮಸ್ಥರಿಗೆ ಈ ರಸ್ತೆ ಸಂಪರ್ಕವೇ ಸರಳ ಹಾಗೂ ಸಮೀಪ ಆಗಿರುವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ.ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕೂಡ ಸೈಕಲ್ ತುಳಿಯುತ್ತಾ ಇದೆ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆ ಇದೆ. ಜಿಲ್ಲೆ ಕಲ್ಲುಗಳನ್ನು ಹರಡಿ ಹಾಗೆ ಬಿಟ್ಟಿರುವುದರಿಂದ ಅನೇಕ ಬಾರಿ ವಾಹನ ಅಪಘಾತಗಳು ಕೂಡ ಸಂಭವಿಸಿವೆ. ಈಗ ಬೇಸಿಗೆ ಸಮಯ ಕುಡಿಯುವ ನೀರಿಗಾಗಿ ಇದೇ ಮಾರ್ಗವಾಗಿ ಅಲೆದಾಡುವ ದುಸ್ಥಿತಿ ಬಂದಿದೆ. ನಿತ್ಯ ನರಕಯಾತನೆ ಅನುಭವಿಸುತ್ತಿರುವ ಈ ರಸ್ತೆ ಭಾಗದ ಜನರಿಗೆ ಕೂಡಲೇ ಬೇಗನೆ ರಸ್ತೆಯನ್ನು ನಿರ್ಮಿಸಿ ಕೊಡಬೇಕು. ಇಲ್ಲವಾದರೆ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮೂಲಕ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಈ ವೇಳೆ ಈಶ್ವರ ಭಜಂತ್ರಿ, ಗಿರಮಲ್ಲ ಬಿರಾದಾರ, ರಾಯಪ್ಪ ತೆಲಸoಗ, ಭೀಮಗೊಂಡ ಬಿರಾದಾರ, ದಿಲೀಪ ಸಾಳುಂಕೆ, ರಮೇಶ ಬಿರಾದಾರ, ರಾಹುಲ ಬೋರಾಡೆ. ನಾರಾಯಣ ಶಿಂಧೆ, ಅಭಾ ಭೋಸಲೆ. ಶ್ರೀಶೈಲ ಮಗದುಮ್ಮ. ಗಣಪತಿ ಮಗದುಮ್ಮ. ಬಾಳು ಭೋಸಲೆ. ನಾರಾಯಣ ಚವ್ಹಾಣ. ನೇತಾಜಿ ಬೋರಾಡೆ. ಶಾಜಿ ಸಾಳುಂಕೆ. ಅಪ್ಪು ಸಾಳುಂಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐಗಳಿ – ಬಡಚಿ ರಸ್ತೆ ಕಾಮಗಾರಿ ಆರಂಭವಾಗಿ ವರ್ಷವೇ ಕಳೆಯುತ್ತಾ ಬಂದರೂ. ಅಧರ್ಂಬರ್ಧ ಕಾಮಗಾರಿಯಿಂದ ನಿತ್ಯ ವಾಹನ ಸಂಚಾರಕ್ಕೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಈ ಬಗ್ಗೆ ಗಮನಹರಿಸುತ್ತಿಲ್ಲ. ಅನೇಕ ಬಾರಿ ಹೇಳಿದರೂ ನಮಗೆ ಸ್ಪಂದಿಸಿಲ್ಲ, ಆದ್ದರಿಂದ ನಾವು ಬರುವ ಮೇ 7 ರಂದು ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ.
ರಸ್ತೆ ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಗುತ್ತಿಗೆದಾರನಿಗೆ ಬೇಗನೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದೇವೆ. ತಾಂತ್ರಿಕ ಸಮಸ್ಯೆಯಿಂದ ಗುತ್ತಿಗೆದಾರನಿಗೆ ಸರ್ಕಾರದಿಂದ ಬರಬೇಕಾದ ಬಿಲ್ ವಿಳಂಬವಾಗಿದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮತ್ತೊಮ್ಮೆ ಸೂಚನೆ ನೀಡುತ್ತೇವೆ.