ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಸಂತೋಷ ಹೂಗಾರ್
ಕಲಬುರಗಿ:ಮಾ.22: ತಾಲೂಕಿನ ಫರಹತಾಬಾದ ಸರಕಾರಿ ಕನ್ನಡ ಪ್ರೌಢ ಶಾಲೆಯಲ್ಲಿಂದು ಬಾಲ ವಿಕಾಸ ಸಂಸ್ಥೆ ವಾರಂಗಲ್/ಹೈದ್ರಾಬಾದ ಹಾಗೂ ಫರಹತಾಬಾದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಜಲ ದಿನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬಾಲ ವಿಕಾಸ ಸಂಸ್ಥೆಯ ಯೋಜನಾ ಸಂಯೋಜಕ ಲಾಲ್ ಸಿಂಗ್ ರಾಠೋಡ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ ವಿಶ್ವ ಜಲ ದಿನವು ಸಿಹಿನೀರಿನ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಲು ಮತ್ತು ಸಿಹಿನೀರಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಯನ್ನು ಉತ್ತೇಜಿಸಲು ಪ್ರತಿ ವರ್ಷ ಮಾರ್ಚ್ 22 ರಂದು ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಮಾರ್ಚ್ 22 ನ್ನು ವಿಶ್ವ ಜಲ ದಿನವೆಂದು ಗೊತ್ತುಪಡಿಸಿದ ನಂತರ 1993 ರಿಂದ ಆಚರಿಸಲಾಗುತ್ತಿದ್ದು, ನೀರನ್ನು ನಮ್ಮ ಅಜ್ಜಂದಿರು ಕೆರೆ – ನದಿಯಲ್ಲಿ, ನಮ್ಮ ತಂದೆ – ತಾಯಂದಿರು ಬಾವಿಯಲ್ಲಿ, ನಾವು ನಲ್ಲಿಯಲ್ಲಿ, ನಮ್ಮ ಮಕ್ಕಳು ಪ್ಲಾಸ್ಟಿಕ್ ಬಾಟಲಲ್ಲಿ, ನಮ್ಮ ಮೊಮ್ಮಕ್ಕಳು ಅದನ್ನು ಎಲ್ಲಿ ನೋಡುತ್ತಾರೆ ? ಕಾಪ್ಸುಲಲ್ಲಿಯೇ!? ನಾವು ನೀರನ್ನು ಇನ್ನೂ ನಿರ್ಲಕ್ಷ್ಯ ಮಾಡಿದರೆ ಅದು ಕಣ್ಣೀರಿನಲ್ಲಿ ಮಾತ್ರ ಕಂಡು ಬರುತ್ತದೆ. ಅದಕ್ಕಾಗಿ ನೀರನ್ನು ಉಳಿಸಿ ಬಳಸೋಣವೆಂದು ಹೇಳಿದರು.
ಇನ್ನೋರ್ವ ಯೋಜನಾ ಸಂಯೋಜಕ ವಿಠಲ ದೊಡ್ಡಮನಿ ಅವರು ಮಾತನಾಡಿ, ಮಳೆ ನೀರು ಕೊಯ್ಲು, ಜಲ ಮರುಪೂರಣ ವ್ಯವಸ್ಥೆ, ಬಾವಿ, ಕೆರೆ, ಕಟ್ಟೆಗಳ ಹೂಳೆತ್ತುವುದು, ಸಿಡಿ, ಬಂದಾರ, ಇಂಗುಗುಂಡಿಗಳ ನಿರ್ಮಾಣ, ನೀರಿನ ಸ್ಥಾವರಗಳ ದುರಸ್ತಿ ಇವೇ ಮುಂತಾದ ಕ್ರಮಗಳಿಂದ ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸಬೇಕು ಮತ್ತು ಅದರ ಸದ್ಬಳಕೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಹ ಶಿಕ್ಷಕ ಸಂತೋಷ ಹೂಗಾರ್ ಅವರು ಮಾತನಾಡಿ, ನೀರು ಬರೀ ನೀರಲ್ಲ, ಅದು ಜೀವಾಮೃತ. ನೀರಿಲ್ಲದೇ ಪ್ರಪಂಚವೇ ಇಲ್ಲ. ನೀರು ಭೂಮಂಡಲದ ಬೇರು. ನೀರು ಭವಿಷ್ಯದ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನೀರು ನವೀಕರಿಸಬಹುದಾದ ಮೂಲವಲ್ಲ. ಭೂಮಿಯಲ್ಲಿ ಒಟ್ಟು ನೀರಿನ ಶೇಖರಣಾ ಪ್ರಮಾಣದಲ್ಲಿ ಶೇ. 2.7 ರಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ. ಒಬ್ಬ ಮನುಷ್ಯನಿಗೆ ಪ್ರತಿನಿತ್ಯ 2-3 ಲೀಟರ್ ಯೋಗ್ಯ ಗುಣಮಟ್ಟದ ಕುಡಿಯುವ ನೀರಿನ ಅವಶ್ಯಕತೆಯಿದ್ದರೆ, ಇತರ ಬಳಕೆಗೆ ಗ್ರಾಮಾಂತರ ಪ್ರದೇಶಗಳಲ್ಲಿ 40 ಲೀಟರ್ ಆದರೂ ಬೇಕಾಗಬಹುದು. ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ – ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ತಳವಾರ ಅವರು ವಹಿಸಿದ್ದರು. ಸ.ಮಾ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ, ಶುದ್ಧ ಕುಡಿಯುವ ನೀರಿನ ಘಟಕದ ಪ್ರಧಾನ ಕಾರ್ಯದರ್ಶಿ ರವಿ ಹಾಲಕಾಯಿ, ಸೋಮಶೇಖರ್ ಜೀವಣಗಿ, ಪದ್ಮಾವತಿ ಪೂಜಾರಿ, ಮಹಾನಂದಾ ಆಲ್ಮದ, ಸಿದ್ಧರಾಮ ಎಸ್ ತಳವಾರ ಸೇರಿದಂತೆ ಶಾಲೆಯ ಎಲ್ಲಾ ಆಚಾರ್ಯ ವರ್ಗ, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಅಧ್ಯಕ್ಷ ಡಾ. ಶಿವಕುಮಾರ ಶರ್ಮಾ ಅವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.