ಜೀವ ಬೆದರಿಕೆ: ಹಣಮಂತ ಯಳಸಂಗಿ ವಿರುದ್ಧ ಎಫ್‍ಐಆರ್
ಕಲಬುರಗಿ,ಮಾ.22-ನಗರದಲ್ಲಿ ಇತ್ತೀಚೆಗೆ ನಡೆದ ದಲಿತ ಸೇನೆ ಕಾರ್ಯಕ್ರಮದಲ್ಲಿ ಹಣಮಂತ ಯಳಸಂಗಿ ಅವರು ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಠ್ಠಲ ದೊಡ್ಡಮನಿ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಹಣಮಂತ ಯಳಸಂಗಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಸಮಿತಿಯನ್ನು ಸ್ವಯಂ ಘೋಷಿತವಾಗಿ ಕಟ್ಟಿಕೊಂಡಿದ್ದರು. ಇದನ್ನು ವಿರೋಧಿಸಿ ಸಮಾಜದ ಮುಖಂಡರು ಹಾಗೂ ಜಯಂತ್ಯೋತ್ಸವ ಸಮತಿ ಮಾಜಿ ಅಧ್ಯಕ್ಷರು ಸಭೆ ಸೇರಿ ಅಧಿಕೃತ ಸಮಿತಿ ಅಧ್ಯಕ್ಷರಾಗಿ ರಾಜು ಸಂಕಾ ಅವರನ್ನು ನೇಮಿಸಲಾಗಿತ್ತು. ಇದನ್ನು ಸಹಿಸದೆ ಯಳಸಂಗಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೊಡ್ಮನಿ ದೂರಿನಲ್ಲಿ ತಿಳಿಸಿದ್ದಾರೆ.
ಜೂಜಾಟ: 7 ಜನರ ಬಂಧನ
ನಗರದ ಬಿದ್ದಾಪುರ ಕಾಲೋನಿಯ ರೈಲ್ವೆ ಬ್ರಡ್ಜ್ ಹತ್ತಿರವಿರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಅಶೋಕನಗರ ಪೊಲೀಸ್ ಠಾಣೆ ಪಿಎಸ್‍ಐ ಬಸಲಿಂಗಪ್ಪ ಹಾಗೂ ಸಿಬ್ಬಂದಿ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ.
ಮಹ್ಮದ್ ಹನೀಫ್, ಲಕ್ಷ್ಮೀಕಾಂತ ಪೊಲೀಸ್ ಪಾಟೀಲ, ಚಂದ್ರಕಾಂತ ಹೊನ್ನಳ್ಳಿ, ಚಾಂದಶೇಖ್, ಮಲ್ಲೇಶ್ ಕಣ್ಣಿ, ಅಂಬ್ರೀಶ್ ಹೊಡಲ್ ಮತ್ತು ವಿಶ್ವರಾಜ ಪಾಟೀಲ ಎಂಬುವವರನ್ನು ಬಂಧಿಸಿ 3,750 ರೂ.ನಗದು, 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.