ಶಿಕ್ಷಕಿ, ಪಿಡಿಒಗೆ ಚಾಕು ತೋರಿಸಿ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಸುಲಿಗೆ
ಕಲಬುರಗಿ,ಮಾ.22-ಶಿಕ್ಷಕಿ ಮತ್ತು ಪಿಡಿಒಗೆ ಚಾಕು ತೋರಿಸಿ ಚಿನ್ನಾಭರಣ, ನಗದು ಸುಲಿಗೆ ಮಾಡಿರುವ ಘಟನೆ ನಗರ ಹೊರವಲಯದ ಕುಸನೂರ ರಸ್ತೆಯ ಝಾಪೂರ ಗುಡ್ಡದ ಹತ್ತಿರ ನಡೆದಿದೆ.
ಆಳಂದ ತಾಲ್ಲೂಕಿನ ಮುನ್ನೊಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗೇಶಮೂರ್ತಿ ಚೆಂಗಟಾ ಅವರು ಕುಸನೂರ ರಸ್ತೆಯ ಝಾಫೂರ ಗುಡ್ಡದ ಹತ್ತಿರ ಕಾರು ನಿಲ್ಲಿಸಿದ ವೇಳೆ ಬೈಕ್ ಮೇಲೆ ಬಂದ 25 ರಿಂದ 30 ವರ್ಷ ವಯಸ್ಸಿನ ಇಬ್ಬರು ಯುವಕರು ಅವರಿಗೆ ಚಾಕು ತೋರಿಸಿ ಬೆದರಿಸಿ ಅವರ ಬಳಿ ಇದ್ದ 25 ಗ್ರಾಂ. ಬಂಗಾರದ ಚೈನ್, 10 ಗ್ರಾಂ.ಬಂಗಾರದ ಎರಡು ಉಂಗುರ, 4 ಸಾವಿರ ರೂ.ನಗದು ದೋಚಿದ್ದಾರೆ. ಇದಕ್ಕೂ ಮುನ್ನ ಸುಲಿಗೆಕೋರರು ಅದೇ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಖಾಸಗಿ ಶಾಲಾ ಶಿಕ್ಷಕಿ ಪ್ರಮೋದಿನಿ ಶೀಲವಂತ ಅವರಿಗೆ ಚಾಕು ತೋರಿಸಿ ಬೆದರಿಸಿ ಅವರ ಬಳಿ ಇದ್ದ 25 ಬಂಗಾರದ ಚೈನ್ ಮತ್ತು 5 ಗ್ರಾಂ.ಬಂಗಾರದ ಉಂಗುರ ದೋಚಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.