ಮೈಸೂರಿನ ಕಲ್ಲು ಚಿತ್ರದುರ್ಗದಲ್ಲಿ ಅರಳಿ ಶಿಲ್ಪವಾಗುತ್ತಿದೆ.
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೧೮; ಮೈಸೂರಿನ ಸುತ್ತಮುತ್ತ ಸಿಗುವ ಕೃಷ್ಣಶಿಲೆ ಎಂಬ ಕಲ್ಲನ್ನು ಚಿತ್ರದುರ್ಗಕ್ಕೆ ತಂದು, ಅದರಲ್ಲಿ  ವೈವಿಧ್ಯಮಯವಾದ ಕಲೆಗಳನ್ನ, ಶಿಲ್ಪಗಳನ್ನ ಕೆತ್ತನೆ ಮಾಡಿ, ನಮ್ಮ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ಸಾರ್ವಜನಿಕರಿಗೆ ಉಣಬಡಿಸುತ್ತಿರುವ ಶಿಲ್ಪಿ ಶಿವಕುಮಾರ್ ರವರು ಎಲ್ಲಾ ಯುವ ಜನಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ನಿರುದ್ಯೋಗ ಸಮಸ್ಯೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕರು ಶಿಲ್ಪಕಲೆಯನ್ನು ಸಹ ಒಂದು ಉದ್ಯೋಗವನ್ನಾಗಿ ಅಳವಡಿಸಿಕೊಂಡು, ಜೀವನವನ್ನು ನಿರ್ವಹಿಸಿಕೊಳ್ಳಬಹುದು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್. ಕೆ. ಎಸ್. ಸ್ವಾಮಿ ನಿವೇದಿಸಿಕೊಂಡಿದ್ದಾರೆ.ಪ್ರತಿ ಕಲ್ಲನ್ನು ಶಿಲ್ಪವನ್ನಾಗಿ ರೂಪಿಸಲು ಸಾಧ್ಯವಾಗುವುದಿಲ್ಲ, ಕೆಲವೊಂದು ವಿಶಿಷ್ಟವಾದ ಕಲ್ಲುಗಳು, ಎಲ್ಲಾ ಉಷ್ಣ, ಶೀತ, ಬಿಸಿಲನ್ನ ಸಹಿಸಿಕೊಂಡು, ಯಾವುದೇ ವಿಕಾರವನ್ನು ಹೊಂದದಂತಹ ಕಲ್ಲುಗಳನ್ನೇ ಬಳಕೆ ಮಾಡಿ, ಶಿಲ್ಪಗಳನ್ನು ಕೆತ್ತಬೇಕಾಗುತ್ತದೆ. ಅಂತಹ ಕಲ್ಲುಗಳು ಭೂಮಿಯ ಹೊರಗಿಗಿಂತ, ಮೇಲ್ಭಾಗಕ್ಕಿಂತ, ಭೂಮಿಯ ಕೆಳಭಾಗದಲ್ಲಿ ದೊರೆಯುತ್ತವೆ. ಅವುಗಳನ್ನು  ಹೊರ ತೆಗೆದು ನಿರ್ದಿಷ್ಟವಾದ ಗಾತ್ರಕ್ಕೆ ಕತ್ತರಿಸಿ, ಅವುಗಳನ್ನು ಸಾಗಾಣಿಕೆ ಮಾಡಿ ತಂದು, ಅವುಗಳನ್ನು ಕೆತ್ತನೆ ಮಾಡಿ, ಅದಕ್ಕೊಂದು ರೂಪ ಕೊಟ್ಟಾಗ, ಅದು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತದೆ ಹಾಗೂ ಜನರ ಭಾವನೆಗಳನ್ನು ಬದಲಾಯಿಸಲು ಸಹಕಾರಿಯಾಗುತ್ತದೆ ಎಂದರು.ಶಿಲ್ಪಕಲೆಯಲ್ಲಿ ನಮ್ಮ ನಾಡು ಜಗದ್ವಿಖ್ಯಾತಿ ಪಡೆದಿದ್ದನ್ನ ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಅಂತಹ ಗುಡಿ ಕೈಗಾರಿಕೆಯ ಕೌಶಲ್ಯವಾದಂತ ಶಿಲ್ಪಕಲೆಯನ್ನ ಈಗಲೂ ಸಹ ಕೆಲ ಯುವಕರು, ಜೀವನದಲ್ಲಿ ಅಳವಡಿಸಿಕೊಂಡು ಅದರ ಮೇಲೆ ಬದುಕನ್ನ ಸಾಗಿಸುತ್ತಿದ್ದಾರೆ. ಅಂತವರಿಗೆ ಸರ್ಕಾರ, ಸಂಘ ಸಂಸ್ಥೆಗಳು ಸಹಾಯ ಹಸ್ತವನ್ನು ನೀಡಿ, ಅವರನ್ನ ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ, ಅವರಿಂದ ಇನ್ನೊಂದು ಜನಾಂಗದವರಿಗೆ ತರಬೇತಿಯನ್ನು ನೀಡಿ, ಇಂತಹ ಕಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.ಒಂದು ಕ್ವಿಂಟಾಲಿಗೆ 8000 ದಷ್ಟು ಬೆಲೆ ಬಾಳುವ ಈ ಕಲ್ಲುಗಳನ್ನು, ಮೈಸೂರಿನ ಸುತ್ತಮುತ್ತಲಿರುವ 50 ರಿಂದ 60 ಕಿಲೋಮೀಟರ್ ವಿಸ್ತೀರ್ಣದಲ್ಲಿ ದೊರೆಯುವ ಈ ಕಲ್ಲುಗಳನ್ನ ಕೆಲವೊಮ್ಮೆ ಭೂಮಿ ಹಗೆಯುವಾಗ, ರೈತರ ಜಮೀನಿನಲ್ಲಿ ಅಥವಾ ಗಣಿಕೈಗಾರಿಕೆಯಲ್ಲಿ ಕೆಳಮಟ್ಟದ ನೆಲಬಗೆಯುವಾಗ, ಜೆಸಿಬಿಯಿಂದ ಮಣ್ಣು ತೆಗೆಯುವಾಗ, ಈ ತರಹದ ಕಲ್ಲುಗಳು ದೊರಕುತ್ತವೆ. ಇವುಗಳು ಯಾವುದೇ ಉಷ್ಣ, ಶೀತ, ಬಿಸಿಲಿಗೆ ಕುಗ್ಗದೆ, ಜಗ್ಗದೆ, ಬಲಿಷ್ಠವಾಗಿ ನಿಲ್ಲುವದರಿಂದ, ಇಂತಹ ಕೃಷ್ಣ ಶಿಲೆಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ,  ಬೇರೆ ಕಲ್ಲುಗಳಾದರೆ ಕೆತ್ತನೆ ಆದ ಮೇಲೆ ವಿಕಾರ ಹೊಂದುವ ಸಂದರ್ಭವಿರುತ್ತದೆ. ಇಂತಹ ಕಲ್ಲುಗಳು ನಮ್ಮ ರಾಜ್ಯದಲ್ಲಿ ದೊರೆಯುತ್ತಿರುವುದು ನಮ್ಮ ಪುಣ್ಯ ಎಂದರು.