ಗಣಿತ ವಿಷಯ ಸರಳವಾಗಿ ಸ್ವೀಕರಿಸಿ : ಬಿರಾದರ್
ಔರಾದ್ : ಮಾ.22:ಗಣಿತ ವಿಷಯ ಕಬ್ಬಿಣದ ಕಡಲೆಯನ್ನದೆ ಮಕ್ಕಳು ಶಾಲೆಯಲ್ಲಿ ಅಧ್ಯಾಪಕರು ಹೇಳಿದ ಪಾಠಗಳನ್ನು ಸರಿಯಾಗಿ ಕೇಳಿ ಪರೀಕ್ಷೆಯಲ್ಲಿ ಸರಾಗವಾಗಿ ಉತ್ತರಗಳನ್ನು ಬರೆಯಬೇಕು ಎಂದು ಸಂತಪೂರ್ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯ ಮುಖ್ಯ ಗುರು ಹಾಗೂ ಗಣಿತ ವಿಷಯ ಮನೋಹರ ಬಿರಾದರ್ ಹೇಳಿದರು.
ಗುರುವಾರ ಪಟ್ಟಣದ ಅಮರೇಶ್ವರ ಕನ್ಯಾ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಏರ್ಪಡಿಸಿದ ಗಣಿತ ವಿಷಯ ಅಭಯ ಕಾರ್ಯಗಾರದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಮಕ್ಕಳು ಅಧ್ಯಾಪಕರನ್ನು ಅವಲಂಭಿತರಾಗದೆ ಪ್ರತಿಯೊಂದು ಪ್ರಶ್ನೆಗೂ ಸ್ವಂತಿಕೆಯ ಉತ್ತರವನ್ನು ಕಂಡುಕೊಂಡು ಮತ್ತು ಗುರುಗಳ ಜೊತೆ ಉತ್ತಮ ಸಂಬಂದ ಇಟ್ಟುಕೊಳ್ಳುವುದು ಉತ್ತಮ ವಿದ್ಯಾರ್ಥಿಯ ಗುಣಲಕ್ಷಣವಾಗಿರುತ್ತದೆ. ಮಕ್ಕಳಿಗೆ ಗಣಿತವೆಂದರೆ ಈ ಭಾಗದಲ್ಲಿ ಕಬ್ಬಿಣದ ಕಡಲೆ ಯಾಗಿ ಮಾರ್ಪಟ್ಟಿದೆ. ಅದನ್ನು ಸರಳವಾಗಿ ಸ್ವೀಕರಿಸಿ ಪರೀಕ್ಷೆಯಲ್ಲಿ ನಿರ್ಭಯವಾಗಿ ಉತ್ತರ ನೀಡಬೇಕು ಎಂದರು.
ಶಿಕ್ಷಕಿ ಅಶ್ವಿನಿ ವಲ್ಲೆಪುಲೆ ಮಾತನಾಡಿ, ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯಲೂ ಒಳ್ಳೆ ಗುರಿ, ವಿದ್ಯೆ ಹಾಗೂ ಬುದ್ದಿ ಅಗತ್ಯ ಆದರೆ ಹದಿಹರೆಯದ ಮಕ್ಕಳು ಮನಸ್ಸು ಚಂಚಲವಾಗಿರುತ್ತದೆ. ನಿರ್ದಿಷ್ಟ ಗುರಿಯನ್ನು ಇಟ್ಟುಕೊಳ್ಳುವಲ್ಲಿ ಮಕ್ಕಳು ವಿಫಲರಾಗಿರುತ್ತಾರೆ. ಪ್ರಸ್ತುತ ಜಗತ್ತಿನಲ್ಲಿ ಪ್ರತಿಭಾವಂತರಿಗಷ್ಟೇ ಅವಕಾಶಗಳು ಲಭಿಸುತ್ತಿದ್ದು ಪ್ರತಿಯೊಬ್ಬರು ತಮ್ಮ ಜೀವನವನ್ನು ರಚನಾ ಮಾದರಿಯಲ್ಲಿ ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂಧರ್ಭದಲ್ಲಿ ಗಣಿತ ವಿಷಯದ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿ ಮನೋಹರ ಬಿರಾದಾರ ಅವರಿಗೆ ಸನ್ಮಾನಿಸಲಾಯಿತು. ಮುಖ್ಯಗುರು ರಜನಿಗಂಧ, ಬಸವರಾಜ್ ಮಂತೆ, ಪಲ್ಲವಿ ಪಾಟೀಲ್, ಮಾಲಾಶ್ರೀ, ಅಶ್ವಿನಿ ಸೇರಿದಂತೆ ಇತರರಿದ್ದರು.