ಅಂತರ್ಜಲ ಕುಸಿತ : ಹರಪನಹಳ್ಳಿ ತಾಲೂಕಿನೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣ, ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ.


ಸಂಜೆವಾಣಿವಾರ್ತೆ
ಹರಪನಹಳ್ಳಿ.ಮಾ.22; ಬಿಸಿಲಿನ ತಾಪಮಾನ ಹೆಚಾಗುತ್ತಿದ್ದು, ತುಂಗಭದ್ರ ನದಿ ಹಾಗೂ ಕೊಳವೆಬಾವಿಗಳ ಅಂತರ್ಜ ಕುಸಿತದಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ 64 ಕಡೆಗಳಲ್ಲಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಆ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.ತಾಲೂಕು ಆಡಳಿತ ಈಗಾಗಲೇ 64 ಕಡೆಗಳಲ್ಲಿ ನೀರಿನ ಮುಂಜಾಗೃತ ಕ್ರಮವಾಗಿ ಟಾಸ್ಕ್ ಪೋರ್ಸ ಅಡಿಯಲ್ಲಿ ಖಾಸಗಿ ಕೊಳವೆಬಾವಿಗಳ ರೈತರಿಂದ ಬಾಡಿಗೆ ಆಧಾರದ ಮೇಲೆ ಪಡೆದು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ತಾಲೂಕಿನ ಅಣಜಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸಿಕಟ್ಟೆ ಗ್ರಾಮದಲ್ಲಿ ಬಾಡಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 72 ಕೊಳವೆಬಾವಿ ಅಂತರ್ಜಲ ಕುಸಿತ: ಕುಡಿಯುವ ನೀರಿಗೆ ತುಂಗಭದ್ರೆ ಜೀವನಾಡಿಯಾಗಿದ್ದು, ಅದು ನೀರಿನ ಪ್ರಮಾಣ ಇಳಿಮುಖವಾಗಿದ್ದು, ಇದರಿಂದ ಹರಪನಹಳ್ಳಿ ಪಟ್ಟಣದ ಜನತೆ ಕುಡಿಯುವ ನೀರಿನ ಆತಂಕವನ್ನು ಎದುರಿಸುವಂತಾಗಿದೆ.ಹರಪನಹಳ್ಳಿ ಪಟ್ಟಣ ಅಂದಾಜು 60 ಸಾವಿರ ಜನಸಂಖ್ಯೆಯನ್ನು ಹೊಂದಿದ್ದು, ಹೊಸ ಹೊಸ ಬಡಾವಣೆಗಳು ತಲೆಎತ್ತಿವೆ, ಇಲ್ಲಿಗೆ 30 ಕಿಲೋ ಮೀಟರ ದೂರದ ತುಂಗಭದ್ರ ನದಿಯಿಂದ ಕುಡಿಯುವ ನೀರನ್ನು ಪುರಸಭೆಯವರು ಪೂರೈಕೆ ಮಾಡುತ್ತಿದ್ದಾರೆ.ಆದರೆ ನದಿ ಬತ್ತಿದ್ದು, ಪುರಸಭೆಯವರು ನೀರು ಸರಬರಾಜಿಗೆ ನದಿಯಲ್ಲಿ ಸ್ಥಾಪಿಸಿರುವ ಜಲಗಾರಕ್ಕೆ ನೀರು ಸಿಗದ ಕಾರಣ 5 ಹೆಚ್‌ಪಿಯ 5 ಮೋಟಾರುಗಳನ್ನು ಅಳವಡಿಸಿ ಪೈಪುಗಳನ್ನು ಹಾಕಿ ಜಾಕ್ವೆಲ್ ಪಂಪಸೆಟ್ ಮೂಲಕ ಸರಬರಾಜಿಗೆ ಕ್ರಮ ಕೈಗೊಂಡಿದ್ದಾರೆ, ಹಾಗೂ ನದಿಗೆ ಅಡ್ಡಲಾಗಿ ಒಡ್ಡನ್ನು ಸಹ ಕಟ್ಟಿದ್ದಾರೆ. ಅದರಿಂದ ಈಗ ಹರಪನಹಳ್ಳಿ ಪಟ್ಟಣಕ್ಕೆ 2 -3 ದಿನಗಳಿಗೊಮ್ಮೆ ನದಿ ನೀರು ಪೂರೈಕೆಯಾಗುತ್ತಿದೆ.ಪುರಸಭೆಯ 72 ಕೊಳವೆಬಾವಿಗಳಿದ್ದು, ಇವುಗಳಲ್ಲಿ ಅಂತರಜಲ ಕುಸಿದಿದ್ದು, ಸ್ವಲ್ಪ ಮಟ್ಟಿನ ನೀರು ಬರುತ್ತದೆ. ಆದ್ದರಿಂದ ಯಾರಾದರೂ ಖಾಸಗಿ ಕೊಳವೆಬಾವಿ ನೀರು ಕೊಡಲು ಮುಂದಾದರೆ ಅಂತಹ ಬೋರ್ ಮಾಲಿಕರಿಗೆ ಮಾಸಿಕ 9 ಸಾವಿರ ಬಾಡಿಗೆ ನೀಡಲಾಗುವುದು ಎಂದು ಪುರಸಭೆಯವರು ಹೇಳುತ್ತಾರೆ.ನೀರನ್ನು ಮಿತವಾಗಿ ಬಳಸಿ, ಅನಗತ್ಯವಾಗಿ ನೀರನ್ನು ಪೋಲ್ಮಾಡಬೇಡಿ, ಎಂದು ಪುರಸಭೆಯವರು ಸಾಮಾಜಿಕ ಜಾಲತಾಣದ ಹಾಗೂ ಕಸ ವಿಲೇವಾರಿ ವಾಹನದ ಧ್ವನಿ ವರ್ದಕ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಿದ್ದಾರೆ.