ಡೆಂಗ್ಯೂ-ವಾಂತಿ-ಬೇದಿ ನಿಯಂತ್ರಣ: ಜನಜಾಗೃತಿ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೨- ತಾಲೂಕಿನ ತುರವಿಹಾಳ ಪಟ್ಟಣದಲ್ಲಿ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ವತಿಯಿಂದ ಡೆಂಗ್ಯೂ ಜ್ವರ ಮತ್ತು ವಾಂತಿ ಭೇದಿ ಕುರಿತು ಆರೋಗ್ಯಕರ ಜನ ಜಾಗೃತಿ ಮೂಡಿಸಿದರು.
ತುರವಿಹಾಳ ಪಟ್ಟಣದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ ವೈದ್ಯಾಧಿಕಾರಿಗಳಾದ ಡಾ.ಮಂಜುನಾಥ ಅಣ್ಣಾಗೌಡರ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪ್ರಸನ್ನ ಕಲ್ಯಾಣ ಶೆಟ್ಟಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದರು.
ಬೆಸಿಗೆ ಕಾಲದ ಇರುವುದರಿಂದ ಪ್ರತಿಯೊಬ್ಬರೂ ಕಾಯಿಸಿ, ಆರಿಸಿದ ನೀರನ್ನು ಕುಡಿಯಿರಿ, ನೀರು ಸಂಗ್ರಹ ಪರಿಕರ ಗಳಾದ ನೀರಿನ ತೊಟ್ಟಿ, ಕಲ್ಲಿನ ದೋಣಿ ಸೇರಿದಂತೆ ಎಲ್ಲವನ್ನು ತಿಕ್ಕಿತೊಳೆದು ಭದ್ರವಾಗಿ ಮುಚ್ಚಿಡಬೇಕು, ಜ್ವರದ ಲಕ್ಷಣಗಳ ಕಂಡು ಬಂದ ಕೂಡಲೇ ತಕ್ಷಣ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಕೊಡಿ. ಈ ರೋಗ ಈಡೀಸ್ ಈಜಿಪ್ತ್ ಸೊಳ್ಳೆಯಿಂದ ಬರುತ್ತಿದ್ದು, ಪ್ರಾರಂಭದಲ್ಲೆ ಚಿಕಿತ್ಸೆ ನೀಡಿದರೆ ಪ್ರಾಣಾಪಾಯದಿಂದ ಪಾರಾಗಬಹುದು. ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕೆ ಕಾಳಜಿ ಕೊಡಿ ಸಮಯಕ್ಕೆ ಸರಿಯಾಗಿ ಹೆಚ್ಚು ನೀರು ಕುಡಿದು ದೇಹವನ್ನು ತಂಪಾಗಿಸಿಕೊಳ್ಳಿ ಎಂದರು.
ಇದೇ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಅಮರೇಶ, ಪರಮೇಶ್ವರ, ಭಾಗ್ಯಶ್ರೀ, ಇಂದಿರಾ ಸೇರಿದಂತೆ ಹಲವರಿದ್ದರು.