ಪರಿಕ್ಷಾ ಕೇಂದ್ರದ ಸುತ್ತ-ಮುತ್ತ ನಿಷೇಧ ಕಾಯ್ದೆ ಜಾರಿ
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮಾ.೨೨- ಲಿಂಗಸುಗೂರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ೧೪೪ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ ಹೇಳಿದರು.
ನಗರದ ಜಿಟಿಟಿಸಿ ಕಾಲೇಜಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವಸಿದ್ದತಾ ಸಭೆಯಲ್ಲಿ ಬುಧವಾರ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಖಾಸಗಿ ಶಾಲಾ ವಾಹನ, ಎಪಿಎಂಸಿ, ಹಟ್ಟಿಚಿನ್ನದಗಣಿ ವಾಹನಗಳನ್ನು ಪಡೆಯಲಾಗುವುದು. ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕೇಂದ್ರಗಳ ಸುತ್ತ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಬೇಕು. ಪರೀಕ್ಷಾ ಕೇಂದ್ರಗಳ ಪ್ರತಿಯೊಂದು ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಕೊಠಡಿ ಮೇಲ್ವಿಚಾರಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ತರದಂತೆ ನೋಡಿಕೊಳ್ಳಬೇಕು. ಈ ಬಾರಿ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅನುಕೂಲ ಮಾಡಿದ್ದರಿಂದ ಹೆಚ್ಚು ಗಮನಹರಿಸಿ ಪರೀಕ್ಷೆ ಸುಗಮವಾಗಿ ನಡೆಸಲು ಸಿದ್ಧರಿರಬೇಕು ಎಂದು ತಹಶೀಲ್ದಾರ್ ಡಾ ಮಲ್ಲಪ್ಪ ಯರಗೊಳ ಹೇಳಿದರು
ಕೇಂದ್ರಗಳ ವಿವರ: ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹನಮಂತಪ್ಪಕುಳಗೇರಿ .ಮಾತನಾಡಿ, ತಾಲೂಕಿನಲ್ಲಿ ೧೭ ಪರೀಕ್ಷಾ ಕೇಂದ್ರಗಳಿವೆ. ೧೭ ಮುಖ್ಯ ಅಧೀಕ್ಷಕರು, ೧೭ ಕಸ್ಟೋಡಿಯನ್, ೨೧ ಸ್ಥಿರ ಜಾಗೃತ ಅಧಿ ಕಾರಿಗಳು, ೩ ವಿಚಕ್ಷಣಾ ಜಾಗೃತದಳ, ೮ ಮಾರ್ಗಾಧಿಕಾರಿಗಳು, ೧೭ ಮೊಬೈಲ್ ಸ್ವಾಧೀನಾಧಿಕಾರಿಗಳು ಹಾಗೂ ೩೫೦ ಕೊಠಡಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು ೬೫೫೦, ಇದರಲ್ಲಿ ೬೧೯೪ ಶಾಲಾ ಅಭ್ಯರ್ಥಿಗಳು, ೧೩೮ ಪುನರಾವರ್ತಿತ ಶಾಲಾ ಅಭ್ಯರ್ಥಿಗಳು, ೧೨೯ ಖಾಸಗಿ ಶಾಲಾ ಅಭ್ಯರ್ಥಿಗಳು, ೮೫ ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು, ೪ ಎನ್‌ಎಸ್‌ಆರ್ ಮತ್ತು ಎನ್ ಎಸ್ ಪಿಆರ್ ಅಭ್ಯರ್ಥಿಗಳು ಸೇರಿರುತ್ತಾರೆ ಎಂದರು.
ತಾಪಂ ಇಒ ಅಮರೇಶ ಯಾದವ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ, ಪಿಎಸ್‌ಐ ವಿರೂಪಾಕ್ಷಪ್ಪ, ಜಿಟಿಟಿಸಿ ಪ್ರಾಂಶುಪಾಲ ರಾಜಕುಮಾರ ಇದ್ದರು.