ಪಶು ಅಧೀಕ್ಷಕನ ಎಡವಟ್ಟು, ೫ ಕುರಿ ಸಾವು೧೦೦ಕ್ಕೂ ಅಧಿಕ ಕುರಿ ಅಸ್ವಸ್ಥ, ಕ್ರಮಕ್ಕೆ ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಸಿಂಧನೂರು,ಮಾ.೨೨-ಅವಧಿ ಮೀರಿದ ಔಷಧಿ ಸೇವನೆಯಿಂದ ೫ ಕುರಿಗಳು ಸಾವನ್ನಪ್ಪಿದ್ದು, ೧೦೦ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿರುವ ಘಟನೆ ಸಿಂಧನೂರು ಬಳಿಯ ರತ್ನಾಪುರ ಕ್ಯಾಂಪ್‌ನಲ್ಲಿ ಜರುಗಿದೆ.
ರತ್ನಾಪುರ ಕ್ಯಾಂಪ್‌ನ ಹನುಮಂತಪ್ಪ ಎನ್ನುವ ೬೦೦ ಕುರಿಯ ಮಾಲೀಕರು ತಮ್ಮ ಕುರಿಗಳು ಉತ್ತಮವಾಗಿ ಆಹಾರ ಸೇವಿಸಲು ಮತ್ತು ಆರೋಗ್ಯದಿಂದ ಬೆಳೆಯಲು ಸಿಂಧನೂರು ತಾಲ್ಲೂಕು ಪಶು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ವೇಳೆ ಕುರಿ ಮಾಲೀಕ ಹನುಮಂತಪ್ಪ ಅವರಿಂದ ೨೧ ಸಾವಿರ ರೂ. ಹಣ ಪಡೆದ ಹಿರಿಯ ಅಧೀಕ್ಷಕ ರಾಮಚಂದ್ರ ನಾಯಕ ಕುರಿಗಳಿಗೆ ಔಷಧಿ ನೀಡಿದ್ದಾರೆ. ಈ ಔಷಧಿಯನ್ನು ಮಾಲೀಕರು ಕುರಿಗಳಿಗೆ ತಿನ್ನಿಸಿದ ನಂತರ ನಿನ್ನೆ ೨ ಕುರಿಗಳು ಮೃತಪಟ್ಟಿವೆ. ಇಂದು ೩ ಕುರಿಗಳು ಸಾವನ್ನಪ್ಪಿದ್ದು, ಉಳಿದಂತೆ ೧೦೦ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ಔಷಧಿ ಸೇವಿಸಿದ ನಂತರ ಕುರಿಗಳು ಸಾವನ್ನಪ್ಪಿರುವ ಕುರಿತಂತೆ ವಿಚಾರಣೆ ನಡೆಸಲು ಇಂದು ಮಾಲೀಕ ಹನುಮಂತಪ್ಪ ಸೂಜಿ ಸಿಂಧನೂರು ತಾಲ್ಲೂಕು ಪಶು ಆಸ್ಪತ್ರೆ ಬಳಿ ತೆರಳಿದ್ದಾರೆ.ಹನುಮಂತಪ್ಪ ಅವರಿಗೆ ಬೇಜವಾಬ್ದಾರಿಯಿಂದ ಉತ್ತರಿಸಿರುವ ಅಧೀಕ್ಷಕ ರಾಮಚಂದ್ರನಾಯಕ ಕುರಿಗಳ ಸಾವಿಗೆ ೫೦ ಸಾವಿರ ಪರಿಹಾರ ನೀಡುತ್ತೇನೆ. ತೆಗೆದುಕೊಂಡು ಹೋಗಿ ಎಂದು ಬೇಜವಾಬ್ದಾರಿಯಿಂದ ಉತ್ತರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಈ ಔಷಧಿಯನ್ನು ಉಚಿತವಾಗಿ ವಿತರಿಸಲು ಅವಕಾಶವಿದ್ದರೂ ಸಹ ೬೦೦ ಕುರಿಗಳಿಗೆ ಔಷಧಿ ನೀಡಲು ಒಟ್ಟು ೨೧ ಸಾವಿರ ರೂ.ಗಳನ್ನು ಕುರಿ ಮಾಲೀಕ ಹನುಮಂತಪ್ಪರವರಿಂದ ಪಡೆದು ಅವಧಿ ಮೀರಿದ ಔಷಧಿ ನೀಡಿರುವುದೇ ಕುರಿಗಳ ಸಾವಿಗೆ ಕಾರಣ ಎನ್ನಲಾಗಿದ್ದು, ಆಸ್ಪತ್ರೆ ಮುಂದೆ ಜಮಾಯಿಸಿರುವ ರೈತರು ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.