ವಿದ್ಯಾರ್ಥಿಗಳೇ ಭಯಪಡದೆ, ಧೈರ್ಯವಾಗಿ ಪರೀಕ್ಷೆ ಬರೆಯಿರಿ
ಕಲಬುರಗಿ:ಮಾ.22: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಪ್ರಥಮ ಬಾರಿಗೆ ಬೋರ್ಡ್ ಪರೀಕ್ಷೆ ಎದುರಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಭಯ, ಸಂಶಯ ಕಂಡುಬರುತ್ತದೆ. ಆದ್ದರಿಂದ ಶಿಕ್ಷಕರು, ಪಾಲಕ-ಪೋಷಕ ವರ್ಗವು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ, ಅವರಲ್ಲಿರುವ ಪರೀಕ್ಷೆಯ ಬಗ್ಗೆ ಯಾವುದೇ ರೀತಿದ ಸಂಶಯಗಳನ್ನು ನಿವಾರಿಸಿ, ಸೂಕ್ತ ಮಾರ್ಗದರ್ಶನ ಮಾಡಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೆ ಪರೀಕ್ಷೆ ಬಗ್ಗೆ ಭಯ ಪಡದೆ, ಧೈರ್ಯವಾಗಿ ಪರೀಕ್ಷೆಯನ್ನು ಬರೆಯಬೇಕೆಂದು ಉಪನ್ಯಾಸಕ, ಶಿಕ್ಷಣತಜ್ಞ ಎಚ್.ಬಿ.ಪಾಟೀಲ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಅವಟೆ ಬಿಲ್ಡಿಂಗ್‍ನಲ್ಲಿರುವ ‘ಶ್ರೀ ಬಸವ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಸಂಜೆ ಏರ್ಪಡಿಸಲಾಗಿದ್ದ ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ, ಆಸಕ್ತಿ, ಶೃದ್ಧೆಯಿಂದ ಅಧ್ಯಯನ ಮಾಡಬೇಕು. ಆಗಾಗ್ಗೆ ಪುನರ್‍ಮನನ ಮಾಡಿ. ಪ್ರಮುಖ ಅಂಶಗಳನ್ನು ಪಟ್ಟಿಮಾಡಬೇಕು. ಬರವಣಿಗೆ ಕೌಶಲ ಬೆಳೆಸಿಕೊಳ್ಳಬೇಕು. ಪರೀಕ್ಷೆ ಸಮಯದಲ್ಲಿ ಹಗಲು-ರಾತ್ರಿಯೆನ್ನದೇ ಊಟ, ನಿದ್ರೆ ಬಿಟ್ಟು ಅಧ್ಯಯನ ಮಾಡುವುದು ತಪ್ಪು. ದ್ರವ ಮತ್ತು ಬೇಗ ಜೀರ್ಣವಾಗುವ ಆಹಾರ ಸೇವಿಸಿ. ಧ್ಯಾನ, ಯೋಗ, ಪ್ರಾರ್ಥನೆ ಮಾಡಿ. ಹೊಸ ವಿಷಯ ಅಧ್ಯಯನ ಬೇಡ. ಓದಿರುವುದನ್ನೇ ಪುನರ್ ಓದು ಮಾಡಿ. ಪಾಲಕರು ಮನೆಯಲ್ಲಿ ತಮ್ಮ ಮಕ್ಕಳ ಅಧ್ಯಯನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿಕೊಡಬೇಕು.ಟಿ.ವಿ, ಮೋಬೈಲ್ ಬಳಕೆಯಿಮದ ದೂರವಿರಿ. ಪರೀಕ್ಷೆಯಲ್ಲಿ ಸಮಯದ ಸೂಕ್ತ ಬಳಕೆಯಾಗಲಿ. ಅಂಕಗಳು ಮತ್ತು ಸೂಚಿತ ವಾಕ್ಯಗಳನ್ನು ಗಮನಿಸಿ ಉತ್ತರಿಸಿ. ಉತ್ತಮ ಸಿದ್ಧತೆ, ದೃಢ ವಿಶ್ವಾಸ, ಧೈರ್ಯ, ಧನಾತ್ಮಕ ಚಿಂತನೆಯಿದ್ದರೆ, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಾಕಷ್ಟು ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಮನೋಜ್ಞವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ, ಉಪನ್ಯಾಸಕ ಅಮರನಾಥ ಶಿವಮೂರ್ತಿ, ಟ್ಯುಟೋರಿಯಲ್ಸ್‍ನ ಮುಖ್ಯಸ್ಥ ಮಲ್ಲಿಕಾರ್ಜುನ ಜಿಡಗೆ, ಶಿಕ್ಷಕರಾದ ಸಿದ್ದಾರೂಡ ನರಿಬೋಳ್, ಚನ್ನವೀರ ಕೆ., ಸುಜಾತಾ ಕಂಟಿ, ತ್ರಿವೇಣಿ ಅಂತರಂಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.