ಖಾಸಗಿ ಶಾಲೆಗಳಿಗೆ ಅಂಗನವಾಡಿ ಕೇಂದ್ರ ಪೈಪೊಟಿ ನೀಡಬೇಕು- ನಾಗರತ್ನ
ಸಿರವಾರ,ಮಾ.೨೨-
ಅಂಗನವಾಡಿ ಕೇಂದ್ರಗಳನ್ನು ಹೆಚ್ಚು ಕ್ರೀಯಾಶೀಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತೆಯರಿಗೆ ಅಗತ್ಯ ತರಬೇತಿ ನೀಡಲಾಗುವುದು.
ಪೂರ್ವ ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಕಾರ್ಯಕರ್ತೆಯರ ಮೇಲಿದೆ, ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಸಿಡಿಪಿಓ ನಾಗರತ್ನ ಹೇಳಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಛೇರಿಯಲ್ಲಿ ೫ ನೇ ಹಂತದ ತರಬೇತಿ ಮುಕ್ತಾಯ ಉದ್ಘಾಟಿಸಿ ಮಾತನಾಡಿದ ಅವರುಶಾಲಾಪೂರ್ವ ಶಿಕ್ಷಣ ಮಗುವಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದ್ದು, ಈ ವ್ಯವಸ್ಥೆಯಲ್ಲಿ ಔಪಚಾರಿಕ ಶಿಕ್ಷಣಕ್ಕೆ ಒಳಪಡುವ ಮುನ್ನವೇ ಮಗುವನ್ನು ಶಾಲೆಗೆ ತೆರಳಲು ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ಧಗೊಳಿಸಲಾಗುತ್ತಿದೆ, ಚಿತ್ರಗಳ ಮೂಲಕ ವಸ್ತುಗಳು, ಪ್ರಾಣಿಗಳನ್ನು ಗುರುತಿಸುವುದು, ಅಕ್ಷರಗಳು, ಅಂಕಿ, ಸಂಖ್ಯೆಗಳನ್ನು ಪರಿಚಯಿಸುವ ಮೂಲಕ ಮಕ್ಕಳನ್ನು ಶಾಲಾ ಪೂರ್ವ ಶಿಕ್ಷಣಕ್ಕೆ ತಯಾರಿ ಮಾಡುವ ಹಂತದಲ್ಲಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ.ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಮಗುವಿಗೆ ಅಗತ್ಯ ಜ್ಞಾನ ನೀಡುವುದು, ಸಾಮಾಜಿಕವಾಗಿ ಬೆರೆಯುವಿಕೆ, ಔಪಚಾರಿಕ ಶಿಕ್ಷಣಕ್ಕೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಮಗುವನ್ನು ಸಿದ್ಧಗೊಳಿಸುವಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಾರ್ಯಕರ್ತೆಯರು ಹಳೇ ವಿದ್ಯಾರ್ಥಿಗಳ ಸಂಘ ಪ್ರಾರಂಭಿಸಿ ಅವರಿಂದ ಕೇಂದ್ರಗಳಿಗೆ ಬೇಕಾಗುವ ವಸ್ತುಗಳು ದೇಣಿಗೆ ಸಂಗ್ರಹಿಸಿದರೆ ಅನುಕೂಲವಾಗುತ್ತದೆ ಎಂದರು. ಅಂಗನವಾಡಿ ಮೇಲ್ಬಿಚಾರಕಿಯರಾದ ನಿರ್ಮಲಾ, ಲಕ್ಷ್ಮೀ, ನಾಗಮ್ಮ, ಬಸ್ಸಮ್ಮ , ನಿರ್ಮಲಾ, ಅಂತೋನಮ್ಮ, ಅಂಗನವಾಡಿ ಕಾರ್ಯಕರ್ತೆಯರು ಇದರು.