ಡಿ ಸಿದ್ದಾಪುರ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದ ನಗದುಹಣ, ಸೀರೆಗಳು ಜಪ್ತಿ.
ಸಂಜೆವಾಣಿ ವಾರ್ತೆ 
ಕೂಡ್ಲಿಗಿ. ಮಾ 22 :- ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿಸಂಹಿತೆ ಜಾರಿಯಾಗಿದ್ದು ಕೂಡ್ಲಿಗಿ 96ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗಡಿಭಾಗಕ್ಕೆ ಸಂಬಂಧಿಸಿದಂತೆ ಚೆಕ್ ಪೋಸ್ಟ್ ತೆರೆಯಲಾಗಿದ್ದು ಗುಡೇಕೋಟೆ ಭಾಗದ ವ್ಯಾಪ್ತಿಯಲ್ಲಿ ಡಿ ಸಿದ್ದಾಪುರ ಸಮೀಪದ ಚೆಕ್ ಪೋಸ್ಟ್ ನಲ್ಲಿ ಗುರುವಾರ ನಡೆಸಿದ ವಾಹನಗಳ ತಪಾಸಣೆ ವೇಳೆ ಎರಡು ವಾಹನದಲ್ಲಿ ನಗದು ಹಣ ಮತ್ತೊಂದು ವಾಹನದಲ್ಲಿ ನೂರಕ್ಕೂ ಅಧಿಕ ಸೀರೆಗಳ ಸಾಗಾಟಕ್ಕೆ ಸರಿಯಾದ ದಾಖಲೆ ಇಲ್ಲದೆ ಜಪ್ತಿ ಮಾಡಲಾಗಿದೆ ಎಂದು ತಿಳಿದಿದೆ.
ಗುರುವಾರ ಮಧ್ಯಾಹ್ನ 12ಗಂಟೆ ಸುಮಾರಿಗೆ ಕೆನರಾ ಬ್ಯಾಂಕಿಗೆ ಸಂಬಂದಿಸಿದ 20ಲಕ್ಷ ರೂ ಹಣ ಮಹೇಂದ್ರ ಗೂಡ್ಸ್ ವಾಹನವೊಂದರಲ್ಲಿ ತೆಗೆದುಕೊಂಡು ಬಳ್ಳಾರಿಯಿಂದ ಇಟಗಿ ಗ್ರಾಮೀಣ ಬ್ಯಾಂಕಿಗೆ ತೆಗೆದುಕೊಂಡು ಹೋಗುವಾಗ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ವೇಳೆ ಸಿಕ್ಕಿದ್ದು ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿ  ಸ್ಥಳಕ್ಕೆ ಧಾವಿಸಿದ ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ವಿನಾಯಕ ಹಾಗೂ ಗುಡೇಕೋಟೆ ಪಿಎಸ್ಐ ಅರುಣ್ ಕುಮಾರ ರಾಥೋಡ್ ಸೇರಿದಂತೆ ಗುಡೇಕೋಟೆ ಕೂಡ್ಲಿಗಿ ಸಿಬ್ಬಂದಿ ಪರಿಶೀಲನೆ ನಡೆಸಿ ಹಣ ಸಾಗಾಟದ ವಾಹನದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದೆ ಇದ್ದುದರಿಂದ ಅನುಮಾನಗೊಂಡು ಐಟಿ ಅಧಿಕಾರಿಗಳ ಗಮನಕ್ಕೆ ತರಲಾಗಿ ಪರಿಶೀಲನೆ ನಡೆಸಿದ ಐಟಿ ಅಧಿಕಾರಿಗಳು ಕೆನರಾ ಬ್ಯಾಂಕಿನ ಹಣವೆಂದು ರುಜುವಾತು ಮಾಡಿದ್ದಾರೆಂದು ಹೇಳಲಾಗಿದ್ದು ವಾಹನ ಹಣವನ್ನು ಬಿಟ್ಟು ಕಳುಹಿಸಿರುವ ಬಗ್ಗೆ ತಿಳಿದಿದೆ.
ನಂತರ ನಿನ್ನೆ ಸಂಜೆವೇಳೆ ಅದೇ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸುವ ವೇಳೆ ಕಾರೊಂದರಲ್ಲಿ ಬಳ್ಳಾರಿಯಿಂದ ಕೊಪ್ಪಳ ಕಡೆಗೆ ಹೋಗುವ ಕಾರಿನಲ್ಲಿ 71,450ರೂ ಮೌಲ್ಯದ 104ಸೀರೆಗಳು ಸಾಗಾಟಕ್ಕೆ ಸಂಬಂದಿಸಿದ ಯಾವುದೇ ದಾಖಲಾತಿ ಇಲ್ಲದ ಕಾರಣ ಸೀರೆಗಳನ್ನು ಜಪ್ತಿ ಮಾಡಲಾಗಿದೆ.
ಮತ್ತು ಅದೇ ಸಂಜೆ ಬೈಕೊಂದರಲ್ಲಿ ಗ್ರಾಮೀಣ ಆಕ್ಸಿಸ್ ಬ್ಯಾಂಕಿನ 53,550ರೂ ನಗದು  ಕಲೆಕ್ಷನ್ ಮಾಡಿದ ಹಣವೆಂದು ಹೇಳಲಾಗುತ್ತಿದ್ದೂ ಇದಕ್ಕೂ ಯಾವುದೇ ದಾಖಲೆ ನೀಡದ ಕಾರಣ ಈ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದಿದ್ದು ಗುಡೇಕೋಟೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಈ ಸಂದರ್ಭದಲ್ಲಿ ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಕೂಡ್ಲಿಗಿ ಸಿಪಿಐ ವಿನಾಯಕ, ಗುಡೇಕೋಟೆ ಪಿಎಸ್ಐ ಅರುಣಕುಮಾರ ರಾಥೋಡ್, ಸಿಬ್ಬಂದಿಗಳಾದ ಎಎಸ್ ಐ ಭಾಷಾ, ಸೋಮಶೇಖರ್, ಅಂಜಿನಪ್ಪ,ಗುರುಸ್ವಾಮಿ, ಉಜ್ಜಪ್ಪ, ಕೊಟ್ರೇಶ, ಮಹಾಂತೇಶ್, ಚನ್ನಬಸವನಗೌಡ, ಶಿವು, ನಾಗೇಶ ನಾಗರಾಜ, ಎಸ್ ಎಸ್ ಟಿ ತಂಡದ ಹಾಗೂ ಡಿ ಸಿದ್ದಾಪುರ  ಚೆಕ್ ಪೋಸ್ಟ್ ಉಸ್ತುವಾರಿ ಸಿದ್ದಲಿಂಗಯ್ಯ ಸ್ವಾಮಿ, ಸೇರಿದಂತೆ ಇತರರಿದ್ದರು.
ಅಕ್ರಮ ಮದ್ಯ ವಶ :  ಕಳೆದ ಸಂಜೆ ಗೆದ್ದಲಗಟ್ಟೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವ ಖಚಿತ ಮಾಹಿತಿ ಆಧಾರಿಸಿದ ಗುಡೇಕೋಟೆ ಪಿಎಸ್ಐ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿ ಈಶ್ವರನನ್ನು ವಶಕ್ಕೆ ಪಡೆದು 5171ರೂ ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಈ ಕುರಿತು ನಿನ್ನೆ ರಾತ್ರಿ  ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.