ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಮನೋಬಲ ಹೆಚ್ಚು
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.22: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿರುವ `ಮನೋಬಲ’ ಖಾಸಗಿ ಶಾಲೆಯ ವಿದ್ಯಾರ್ಥಿಗಳಲ್ಲಿ ಇರಲ್ಲ ಎಂದು ನೆರೆಯ ಆಂಧ್ರದ ಜಂಗಮರ ಹೊಸಳ್ಳಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ತಾಲೂಕಿನ ಜಾನೆಕುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಯಮಿ ಜೋಳದರಾಶಿ ತಿಮ್ಮಪ್ಪ ಅವರು ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಪೆನ್ನು ವಿತರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಇಂದಿನ ಯುವಕರು, ಚಂಚಲ ಮನಸ್ಥಿತಿಯನ್ನು ಹೊಂದಿದ್ದಾರೆ. ಫೇಸ್‌ಬುಕ್, ಇನ್ಸ್ಟಾಗ್ರಾಂ ಇತರೆ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ವೀಕ್ಷಿಸುತ್ತಾರೆ. ದೇಶದ ವಿದ್ಯಾರ್ಥಿಗಳು ಪ್ರತಿದಿನ ಎರಡು ಗಂಟೆಗಳ ಕಾಲ ಫೇಸ್‌ಬುಕ್, ಇನ್ಸ್ಟಾಗ್ರಾಂ ವೀಕ್ಷಣೆಯಲ್ಲೇ ಕಾಲ ಕಳೆಯುತ್ತಾರೆ ಎಂದು ಸರ್ವೆಯೊಂದು ಹೇಳಿದೆ. ದಿನದ ೨೪ ಗಂಟೆಗಳಲ್ಲಿ ೨ ಗಂಟೆ ಮೊಬೈಲ್ ನೋಡಲು, ೧೦ ಗಂಟೆ ನಿದ್ದೆ ಮಾಡಲು, ಇನ್ನುಳಿದ ಸಮಯವನ್ನು ಶಾಲೆ ಹೋಗಿ, ಬರಲು ಮಾಡಿದರೆ, ಇನ್ನು ಓದುವುದು ಯಾವಾಗ? ಎಂದು ಶ್ರೀಗಳು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು.
ಬಂಗಾರದಂತಹ ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಮೊದಲ ಹಂತ. ಈ ಹಂತದಲ್ಲೇ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಬರೀ ಟೈಮ್ ಪಾಸ್ ಮಾಡಿ ದೊಡ್ಡವರಾಗದೆ, ಆ ಸಮಯವನ್ನು ಬಳಸಿಕೊಂಡು ಸಾಧನೆ ಮಾಡುವ ಮೂಲಕ ದೊಡ್ಡಬರಾಗಬೇಕು ಎಂದು ಸಲಹೆ ನೀಡಿದರು.
ಕಾಲು ನೋವಿನಿಂದ ಕ್ರೀಡೆಗಳಲ್ಲಿ ಸ್ಪರ್ಧೆಸಲಾಗದೆ ವಿಫಲನಾದ ಬಾಲಿವುಡ್ ನಟ ಶಾರುಖ್‌ಖಾನ್, ಸೀರಿಯಲ್ ಮೂಲಕ ಚಿತ್ರರಂಗಕ್ಕೆ ಬಂದು ಇಂದು ಅವನು ಒಂದು ಸಹಿಗೆ ೫೦೦ ಕೋಟಿ ಗಳಿಸುತ್ತಾನೆ. ಸೈಕಲ್ ತೊಳೆಯುತ್ತಾ ಆಕಾಶದಲ್ಲಿ ಹಾರಾಡುತ್ತದ್ದ ವಿಮಾನವನ್ನು ನೋಡಿದ ಕಲ್ಪನಾ ಚಾವ್ಲಾ, ದೇಶದ ಮೊದಲ ಗಗನಯಾತ್ರಿಯಾದರು. ಹಾಗಾಗಿ ಪ್ರತಿಯೊಬ್ಬರು ನನ್ನ ಸಾಧನೆ ಇದು ಎಂದು ಸಂಕಲ್ಪ ಮಾಡಬೇಕು ಎಂದ ಶ್ರೀಗಳು, ಮಬೈಲ್ ಹಿಡಿದು ನಡೆದರೆ ಎಡುವುತ್ತೇವೆ. ಪುಸ್ತಕ ಹಿಡಿದು ನಡೆದರೆ ಎಡುವುದಿಲ್ಲ ಎಂದು ಕಿವಿಮಾತು ಹೇಳಿದರು.
ಹರಗಿನಡೋಣಿ ಪಂಚವಣಿಗಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಸಾಧನೆ ಮಾಡಿರುವ ಹಲವರು ಸರ್ಕಾರಿ ಶಾಲೆಯ ಮಕ್ಕಳಾಗಿದ್ದಾರೆ. ಕೆಆರ್‌ಎಸ್ ಡ್ಯಾಂ ನಿರ್ಮಿಸಿದ ಸರ್.ಎಂ.ವಿಶ್ವೇಶ್ವರಯ್ಯ, ಕನ್ನಡದ ಸಾಹಿತಿ ಕುವೆಂಪು ಸೇರಿ ಹಲವರು ಸರ್ಕಾರಿ ಶಾಲೆಯಲ್ಲೇ ಓದಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಮಾಲೀಕರಾಗುತ್ತಾರೆ. ಖಾಸಗಿ ಶಾಲೆಯ ಮಕ್ಕಳು ಚಾಕರಿ ಮಾಡುವ ನೌಕರರು, ಸೇವಕರು ಆಗುತ್ತಾರೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ಆಧುನಿಕ ತಂತ್ರಜ್ಞಾನ ಸಾಕಷ್ಟು ಅನಾವರಣಗೊಂಡಿದೆ. ಪ್ರತಿಯೊಬ್ಬರ ಕೈಯಲ್ಲಿರುವ ಮಾಯಾಪೆಟ್ಟಿಗೆಯಂತಹ ಮೊಬೈಲ್ ಬಳಕೆ ಒಂದಷ್ಟು ಕಡಿಮೆ ಮಾಡಬೇಕು. ಹಾಗಂತ ಮೊಬೈಲ್ ಅನುಪಯುಕ್ತವಲ್ಲ. ಅದರಲ್ಲೂ ಸಾಕಷ್ಟು ಮಾಹಿತಿ ದೊರೆಯಲಿದ್ದು, ಪಠ್ಯಕ್ಕೆ ಮಾತ್ರ ಬಳಸಿಕೊಳ್ಳಬೇಕು. ಮೊಬೈಲ್ ಬಳಸಿಕೊಳ್ಳುವವರ ಪ್ರಜ್ಞೆಯನ್ನು ಆಧರಿಸಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಉದ್ಯಮಿ ಜೋಳದರಾಶಿ ತಿಮ್ಮಪ್ಪ ಮಾತನಾಡಿದರು. ಬಳಿಕ ಶಾಲೆಯ ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಪ್ಯಾಡ್, ಪೆನ್ನುಗಳನ್ನು ವಿತರಿಸಿ, ಇನ್ನೆರಡು ದಿನಗಳಲ್ಲಿ ಆರಂಭವಾಗುವ ವಾರ್ಷಿಕ ಪರೀಕ್ಷೆಗಳನ್ನು ಉತ್ತಮವಾಗಿ ಬರೆಯುವಂತೆ ಆಲ್‌ದ ಬೆಸ್ಟ್ ಹೇಳಿದರು.
ಕಾರ್ಯಕ್ರಮದಲ್ಲಿ ಜೋಳದರಾಶಿ ಲಕ್ಷ್ಮಕಾಂತ್ ಗೌಡ, ಉದ್ಯಮಿ ಭೀಮೇಶ್ ಸ್ವಾಮಿ, ಅಶೋಕ್‌ಗೌಡ, ರಂಗಕಲಾವಿದ ಪುರುಷೋತ್ತಮ ಹಂದ್ಯಾಳು, ರುದ್ರಮುನಿಸ್ವಾಮಿ, ಜೋಳದರಾಶಿ ರಮೇಶ್ ಸೇರಿದಂತೆ ಹಲವರು ಇದ್ದರು.