ಲೋಕಸಭೆಗೆ ಸ್ಪರ್ಧಿಸಲು ತುಕರಾಂ ಸಮ್ಮತಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.22: ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಂಡೂರು ಶಾಸಕ, ಮಾಜಿ ಸಚಿವ ಈ.ತುಕರಾಂ ಅವರು ಸಮ್ಮತಿಸಿದ್ದಾರೆ.
ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೆ ಠಕ್ಕರ್ ಕೊಡಲು  ಶಾಸಕ ಈ.ತುಕರಾಂ ಅವರು ತಮ್ಮ ಪುತ್ರಿಯನ್ನು ಕಣಕ್ಕಿಳಿಸಲು ಬಯಸಿದ್ದರು.
ಆದರೆ ಪಕ್ಷ ತುಕರಾಂ ಅವರನ್ನೇ ಕಣಕ್ಕಿಳಿಯುವಂತೆ ತೀವ್ರ ಒತ್ತಡ ತಂದಿತ್ತು. ತುಕರಾಂ ಅವರಿಗಿಂತ ಅವರ ರಾಜಕೀಯ ಸೂತ್ರದಾರ ಸಂತೋಷ್ ಲಾಡ್ ಅವರ ಮೇಲೆ ಸಹ ಒತ್ತಡವಿತ್ತು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ತುಕರಾಂ ಅವರಿಗೆ ನೀನು ಒಪ್ಪಲೇ ಬೇಕೆಂದು ಹಠ ಹಿಡಿದು ಇಂದು ಬೆಂಗಳೂರಿಗೆ ಕರೆಸಿ. ಸಚಿವರಾದ ಸಂತೋಷ್ ಲಾಡ್, ಬಿ.ನಾಗೇಂದ್ರ, ಜಮೀರ್ ಅಹಮ್ಮದ್ , ಮಾಜಿ ಎಂಎಲ್ ಸಿ ಕೆ‌ಎಸ್.ಎಲ್ ಸ್ವಾಮಿ, ಇಬ್ಬರು ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ರಫೀಕ್, ಬಿ.ವಿ.ಶಿವಯೋಗಿ ಮೊದಲಾದವರು ಸೇರಿ ತುಕರಾಂ ಅವರಿಗೆ ಸ್ಪರ್ಧೆ ಮಾಡಲು ಒಪ್ಪಿಸಿದ್ದಾರಂತೆ.
ಈ ಕುರಿತು ಒತ್ತಡ ಇರುವ ಬಗ್ಗೆ ಸಂಜೆವಾಣಿ ನಿನ್ನೆಯೇ ವರದಿ ಪ್ರಕಟ ಮಾಡಿತ್ತು. 
ತುಕರಾಂ ಅವರು  ಲೋಕಸಭೆಗೆ ಹೋದರೆ ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅವರ ಪುತ್ರಿಗೆ ಟಿಕೆಟ್ ನೀಡುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತಂತೆ.