ದಲಿತ ಮಹಿಳೆಗೆ ಅನ್ಯಾಯ, ಪ್ರತಿಭಟನೆ
ವಿಜಯಪುರ.ಮಾ೨೨: ನನಗೆ ಬಾಳು ಕೊಡುವುದಾಗಿ ನಂಬಿಸಿ, ನನ್ನ ಗಂಡನ ಮನೆಯಿಂದ ಕರೆದುಕೊಂಡು ಬಂದು, ಮದುವೆ ಮಾಡಿಕೊಂಡ ಪಟ್ಟಣದ ಪುರುಷೋತ್ತಮ್ ಎಂಬಾತ, ನನ್ನಿಂದ ೧೪ ಲಕ್ಷ ಹಣ ಪಡೆದುಕೊಂಡು, ೬ ವರ್ಷ ಒಟ್ಟಿಗೆ ಸಂಸಾರ ಮಾಡಿ, ಈಗ ನನ್ನ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಹೊರಗೆ ಹಾಕಿದ್ದಾರೆ ಎಂದು ಶಾರದ ಎಂಬುವವರು, ಪುರುಷೋತ್ತಮ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ, ತಮಟೆಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.
ನನಗೆ ೧೩ ವರ್ಷಗಳ ಹಿಂದೆ ಟಿಪ್ಪುನಗರದ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾಗಿದ್ದು, ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿಯ ಸ್ನೇಹಿತ ವಿಜಯಪುರದ ಪುರುಷೋತ್ತಮ್ ಎಂಬಾತ ನನ್ನ ಪತಿಯ ಜೊತೆಯಲ್ಲಿ ನಮ್ಮ ಮನೆಗೆ ಬಂದು ಹೋಗುತ್ತಿದ್ದು, ನನ್ನ ಪತಿ ಮನೆಯಲ್ಲಿ ಇಲ್ಲದಿರುವಾಗ, ಮನೆಗೆ ಬಂದು, ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಮೊಬೈಲ್ ನಲ್ಲಿ ಪೋಟೋಗಳು ತೆಗೆದುಕೊಂಡು, ನನ್ನೊಂದಿಗೆ ಬಂದು ಬಿಡು, ಮದುವೆ ಮಾಡಿಕೊಳ್ಳೋಣ. ಒಂದು ವೇಳೆ ಬಾರದಿದ್ದರೆ ನಿನ್ನ ಗಂಡ, ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಅವರು ಜೀವ ಬೆದರಿಕೆ ಹಾಕಿದ್ದರಿಂದ ನಾನು, ಗಂಡ ಮಕ್ಕಳನ್ನು ಬಿಟ್ಟು, ಪುರುಷೋತ್ತಮ್ ಅವರೊಂದಿಗೆ ಬಂದಿದ್ದೆ, ೨೦೧೮ ರಲ್ಲಿ ತಿರುಪತಿಯಲ್ಲಿ ನಾವಿಬ್ಬರೂ ಮದುವೆ ಮಾಡಿಕೊಂಡಿದ್ದೇವೆ.
೬ ವರ್ಷಗಳಿಂದ ವಿಜಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಮಾಡಿ ಕೊಂಡಿದ್ದೆವು. ನನ್ನ ತವರು ಮನೆಯಿಂದ ೧೪ ಲಕ್ಷ ರೂಪಾಯಿ ಹಣ ತಂದು ಕೊಟ್ಟಿದ್ದೇನೆ. ಈ ಹಣದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಅದರಿಂದ ಬಂದ ಸಂಪಾದನೆಯಲ್ಲಿ ನನ್ನ ಹೆಸರಿನಲ್ಲಿ ನಿವೇಶನ ಖರೀದಿಸುವುದಾಗಿ ಹೇಳಿದ್ದು, ನಿವೇಶನ ಖರೀದಿಸಿದಾಗ ನನ್ನ ಹೆಸರಿನಲ್ಲಿ ಖರೀದಿ ಮಾಡಿಕೊಡದೇ ಅವರ ಹೆಸರಿನಲ್ಲೆ ನೋಂದಣಿ ಮಾಡಿಸಿಕೊಂಡಿದ್ದರು.
ಇದನ್ನು ಪ್ರಶ್ನಿಸಿದಾಗ, ನಾನು ಪರಿಶಿಷ್ಟ ಜಾತಿಗೆ ಸೇರಿದವಳು ಎಂದು ನನ್ನನ್ನು ಜಾತಿ ನಿಂದನೆ ಮಾಡಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ವಿಚಾರವನ್ನು ಅವರ ಸಹೋದರ ಬಳಿ ಹೇಳಿದಾಗ ಅವರೂ ಸಹಾ ನಮ್ಮ ಕಣ್ಣೆದುರಿಗೆ ಇರಬೇಡ, ನಾವು ಆಚಾರರು, ನೀನು ಪರಿಶಿಷ್ಟಳು, ಎಲ್ಲಿಗಾದರೂ ಹೋಗಿ ಸಾಯಿ ಎಂದು ಅವರ ಸ್ನೇಹಿತರೊಂದಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಸಹೋದರ, ಹಾಗೂ ಸ್ನೇಹಿತರು ಹಲ್ಲೆ ನಡೆಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.