ಲೋಕಸಭಾ ಚುನಾವಣೆ ಕಾವು ಏರುತ್ತಿಲ್ಲ ಗ್ರಾಮಾಂತರ ಜಿಲ್ಲೆ ಮತದಾರರೇ ನಿರ್ಣಾಯಕ
ವಿಜಯಪುರ.ಮಾ೨೨: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಆದರೂ ಸಹ ಚುನಾವಣೆಯ ಕಾವು ಏರುತ್ತಿಲ್ಲ.
ಇನ್ನು ಯಾವ ಯಾವ ಪಕ್ಷದಲ್ಲಿ ಯಾರ್‍ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬುದು ಇನ್ನು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್, ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಸಾರ್ವಜನಿಕರಲ್ಲಿ ಇನ್ನು ಚರ್ಚೆಯಾಗಿಯೇ ಉಳಿದಿದೆ. ಆಕಾಂಕ್ಷಿಗಳು ಇದ್ದರೂ ಸಹ ಎರಡು ಪಕ್ಷದಲ್ಲೂ ಸಹ ಇನ್ನು ಅಭ್ಯರ್ಥಿಗಳ ಆಯ್ಕೆಯಾಗಿಲ್ಲ ಎಂದು ತಿಳಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿರುಸು ಇದ್ದದ್ದು, ಲೋಕಸಭಾ ಚುನಾವಣೆಯಲ್ಲಿ ಕಾಣುತ್ತಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿ.ಎನ್ ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಇದೊಂದು ಇತಿಹಾಸ ಬರೆದಿದ್ದಾರೆ. ಈ ಬಾರಿ ಬಿ.ಎನ್ ಬಚ್ಚೇಗೌಡ ಚುನಾವಣೆಯಲ್ಲಿ ನಿಲ್ಲದೆ ವಯೋ ಸಹಜತೆಯಿಂದ ಸ್ಪರ್ಧೆಗೆ ಮುಂದಾಗಿಲ್ಲ. ಸಕ್ರಿಯ ರಾಜಕಾರಣದಲ್ಲಿರುವುದಾಗಿ ಘೋಷಿಸಿದ್ದಾರೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಾಜಿ ಸಚಿವ ಡಾ. ಕೆ ಸುಧಾಕರ್ ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಚರ್ಚೆ ಜನರಲ್ಲಿ ಕಾಡುತ್ತಿದೆ. ಮಂಡ್ಯ ಕ್ಷೇತ್ರದಿಂದ ಟಿಕೆಟ್ ಕೈತಪ್ಪಿರುವ ಸುಮಲತಾ ಅಂಬರೀಶ್ ಗೆ ಬಿಜೆಪಿಯಿಂದ ಟಿಕೆಟ್ ಸಿಗಬಹುದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಈಗಾಗಲೇ ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದಾರೆ. ಹಾಗೂ ಕಾರು ರ್ಯಾಲಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದಾರೆ. ಮಾಜಿ ಸಚಿವ ಡಾ. ಕೆ ಸುಧಾಕರ್ ಸಹ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದಲ್ಲಿ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಓಡಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಕ್ಕಲಿಗ ಜಾತಿಯಾದ ರೈತ ಮತಗಳು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಗಳಿಂದ ೮,೯೧,೭೬೨ ಮತದಾರರು ಇದ್ದಾರೆ. ಮಹಿಳೆಯರು ೪,೫೦,೭೩೭, ಪುರುಷರು ೪,೪೦,೮೮೪, ಮತದಾರರು ಇದ್ದಾರೆ. ಇತರೆ ೧೪೧ ಮತದಾರು ಮತಗಳಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರನ್ನು ಹೊಂದಿದ್ದಾರೆ. ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಈಗಾಗಲೇ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಒಬ್ಬರೇ ಗೆದ್ದಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಮುಖ್ಯವಾಗಿ ಯಲಹಂಕ ಕ್ಷೇತ್ರದ ಮತಗಳು ಗೆಲುವಿನ ಲೆಕ್ಕಾಚಾರ ಅಂಶ ಆಗಿರುವುದರಿಂದ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ. ಲೋಕಸಭಾ ಚುನಾವಣೆಯ ಕಾವು ಇನ್ನೂ ಏರಬೇಕಿದೆ. ಲೋಕಸಭಾ ಚುನಾವಣೆಯ ತಮ್ಮ ಪಕ್ಷ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಎರಡು ಪಕ್ಷದ ಮುಖಂಡರು ಸಹ ಕಾಯುತ್ತಿದ್ದಾರೆ.
ಬಿಜೆಪಿ ಪಕ್ಷವೂ ಸಹ ಬೂತ್ ಮಟ್ಟದಲ್ಲಿ ಹಾಗೂ ವಿವಿಧ ಕಡೆಗಳಲ್ಲಿ ಸಭೆಗಳನ್ನು ಮಾಡಿ ಪಕ್ಷವನ್ನು ಸಂಘಟನೆಗೆ ಆದ್ಯತೆ ನೀಡಿದೆ. ಯಾರಿಗೆ ಟಿಕೆಟ್ ಕೊಡಲಿ ಅವರನ್ನು ಗೆಲ್ಲಿಸಲು ನಮ್ಮ ಗುರಿ ಎಂದು ಸಭೆಗಳಲ್ಲಿ ಚರ್ಚೆಯಾಗುತ್ತಿದೆ.