ಮೆರವಣಿಗೆ ಮೂಲಕ ಮತದಾನ ಜಾಗೃತಿ
ವಿಜಯಪುರ.ಮಾ೨೨: ಪಟ್ಟಣದ ಪುರಸಭೆ ಆವರಣದಿಂದ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಿಗೆ ಮೆರವಣಿಗೆಯ ಮೂಲಕ ತೆರಳಿದ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತದಾನ ಜಾಗೃತಿ ಮೂಡಿಸಿದರು.
ಈ ವೇಳೆ ಮುಖ್ಯಾಧಿಕಾರಿ ಜಿ.ಆರ್.ಸಂತೋಷ್ ಮಾತನಾಡಿ, ಯಾವ ಯಾವ ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆಯೋ ಅಂತಹ ಮತಗಟ್ಟೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಬೇಕಾಗಿದೆ. ಪಟ್ಟಣದಲ್ಲಿ ೩೩ ಮತಗಟ್ಟೆಗಳಿದ್ದು, ೬ ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಅಂತಹ ಮತಗಟ್ಟೆಗಳಿರುವ ವಾರ್ಡುಗಳಿಗೆ ತೆರಳಿ ಮತದಾರರಿಗೆ ಜಾಗೃತಿ ಮೂಡಿಸಲಾಗುತ್ತದೆ.
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಒಂದು ಪವಿತ್ರವಾದ ಕಾರ್ಯವಾಗಿದ್ದು, ಯುವಮತದಾರರು ಸೇರಿದಂತೆ ಪ್ರತಿಯೊಬ್ಬರೂ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕು ಎಂದರು.
ಕಂದಾಯ ನಿರೀಕ್ಷಕ ತ್ಯಾಗರಾಜ್ ಮಾತನಾಡಿ, ಪ್ರತಿಯೊಬ್ಬ ಮತದಾರನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕು. ಇತರರಿಗೂ ಮತದಾನ ಮಾಡುವಂತೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವ ಯುವ ಮತದಾರರಿಗೆ ಮತಯಂತ್ರದಲ್ಲಿ ಮತದಾನ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಪುರಸಭೆ ಸಿಬ್ಬಂದಿಯಾದ ಅನಿಲ್, ಪವನ್ ಜ್ಯೋಶಿ, ಜನಾರ್ಧನ, ಸುನೀಲ್, ಮಂಜುನಾಥ್, ಪೃಥ್ವಿ, ಹೇಮಾವತಿ, ಲಿಂಗಣ್ಣ, ಕುಮಾರ್, ಮಂಜುನಾಥ್, ಹೇಮಂತ್ ಕುಮಾರ್, ಇದ್ದರು.