ಸಾಧನೆಗೆ ವ್ಯಕ್ತಿತ್ವ ವಿಕಸನವೂ ಮುಖ್ಯ: ಶಂಕರ್ ಬೆಳ್ಳೂರು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ:ಮಾ.22:- ಸಾಧನೆಗೆ ಪದವಿ ಪ್ರಮಾಣ ಪತ್ರ, ತಾಂತ್ರಿಕತೆ, ಕೌಶಲ್ಯಗಳಷ್ಟೇ ಸಾಲದು ಅದರ ಜೊತೆಗೆ ವ್ಯಕ್ತಿತ್ವ ವಿಕಸನವೂ ಅಗತ್ಯ ಎಂದು ರಾಜ್ಯ ವ್ಯಕ್ತಿತ್ವ ವಿಕಸನ ತರಬೇತುದಾರ ಶಂಕರ್ ಬೆಳ್ಳೂರು ತಿಳಿಸಿದರು.
ಪಟ್ಟಣದಲ್ಲಿರುವ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲಾ ಆವರಣದಲ್ಲಿ ಬಿಜಿಎಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಬೇತಿ ಹಾಗೂ ಜೀವನದ ಗುರಿಸಾಧನೆ ಕುರಿತು ಕೆರಿಯರ್ ಲಾಂಚರ್ ಕಾರ್ಯಕ್ರಮದ ಹಾಗೂ ವಿದ್ಯಾರ್ಥಿಗಳೊಂದಿಗೆ ಚಿಂತನ ಮಂತನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮೊದಲು ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ಇದ್ದರೆ ನಮ್ಮ ವ್ಯಕ್ತಿತ್ವ ಉತ್ತಮಗೊಂಡು ಉತ್ತಮ ಸಾಧಕರಾಗಿ ಮೂಡಿ ಬರಲು ಸಾಧ್ಯ.ಬಹುತೇಕ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಮೆರಿಟ್‍ಗಳಿಸಬೇಕು ಎನ್ನುವ ನಿಟ್ಟಿನಲ್ಲಿ ಮಾತ್ರ ಪ್ರಯತ್ನಿಸುತ್ತವೆ. ಆದರೆ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ, ಅಭಿವ್ಯಕ್ತಿ ಸಾಮಥ್ರ್ಯ, ವ್ಯಕ್ತಿತ್ವ ರೂಪಿಸುವುದರ ಕಡೆಗೆ ಹೆಚ್ಚಿನ ಆದ್ಯತೆ ನೀಡುವುದಿಲ್ಲ. ಇದು ನಮ್ಮ ದುರಂತ ಎಂದು ವಿಷಾದಿಸಿದರು.ನಮ್ಮ ಸುತ್ತಲಿನ ವಾತಾವರಣವನ್ನು ಅರಿತುಕೊಂಡು ಅದಕ್ಕೆ ಹೊಂದಿಕೊಳ್ಳುವ ಸಕಾರಾತ್ಮಕ ನಡವಳಿಕೆ ನಮ್ಮದಾಗಬೇಕು. ಯಾವುದೇ ಸಂದರ್ಭವನ್ನು ಸ್ಪರ್ಧಾತ್ಮಕವಾಗಿ ಸ್ವೀಕರಿಸಬೇಕು. ಬಹುತೇಕ ವಿದ್ಯಾರ್ಥಿಗಳ ಭವಿಷ್ಯ ಈಗ ಸಿಇಟಿಗಳ ಮೇಲೆ ನಿರ್ಧರಿತವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಅತ್ಯಂತ ಪ್ರಮುಖವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸಬೇಕು, ಬಲಿಷ್ಟ ಮನೋಬಲವೊಂದಿದ್ದರೆ ಮನುಷ್ಯನ ಮುಂದೆ ಅಸಾಧ್ಯವಾದ ಕೆಲಸ ಯಾವುದೂ ಇಲ್ಲ. ಸಾಧನೆ ಮಾಡಬೇಕೆಂಬ ಮನೋಬಲವಿದ್ದರೆ ನಮ್ಮ ದೈಹಿಕ ಮಾನಸಿಕ ಯಾವುದೇ ರೀತಿಯ ವೈಕಲ್ಯಗಳು ನಮಗೆ ಅಡ್ಡಿಯಾಗಲಾರವು. ಈಗಿನ ವಿದ್ಯಾರ್ಥಿಗಳು ರಾಷ್ಟ್ಮ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕು.ಮಕ್ಕಳು ನಮಗಾಗಿ ನಾವು ವಿದ್ಯಾರ್ಜನೆಗೈಯಬೇಕು ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಋಣಾತ್ಮಕ ಮನೋಭಾವವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ:ಜೆ ಎನ್ ರಾಮಕೃಷ್ಣೇಗೌಡ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಭಾಷಾಜ್ಞಾನ, ಕೌಶಲ್ಯಾಭಿವೃದ್ಧಿ ಮೂಲಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂದೆ ಉದ್ಯೋಗಗಳಿಸುವ ವಿಚಾರದಲ್ಲಿ ಹೇಗೆ ಯಶಸ್ಸುಗಳಿಸಬಹುದು ಎನ್ನುವುದರ ಬಗ್ಗೆ ಮಾಹಿತಿ ಒದಗಿಸುವುದೆ ಈ ಕಾರ್ಯಕ್ರಮದ ಉದ್ದೇಶ. ಈ ಮಹತ್ವದ ವಿಚಾರಗಳನ್ನು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸದೃಢ ಸಮಾಜ ನಿರ್ಮಾಣ ಮತ್ತು ಈ ಅರ್ಥಪೂರ್ಣ ಕಾರ್ಯಕ್ರಮ ಮಾಡಿದಕ್ಕೂ ಸಾರ್ಥಕ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ರಾಘವೇಂದ್ರ ಪ್ರಸಾದ್, ಪಿರಿಯಾಪಟ್ಟಣ ಕೆ.ಸುರೇಶ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಬಿಜಿಎಸ್ ಎಜುಕೇಶನ್ ಸೆಂಟರ್ ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ವರ್ಗ ಸೇರಿದಂತೆ ಇತರರಿದ್ದರು.