ಹೆಚ್.ಡಿ.ಕೆ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.22: ಹೃದಯಶಸ್ತ್ರ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಬೇಗ ಗುಣಮುಖರಾಗಿ ಮತ್ತೆ ಜನಸೇವೆಗೆ ಹಿಂತಿರುಗಲಿ ಎಂದು ಪ್ರಾರ್ಥಿಸಿ ತಾಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ನಾಗಮಂಗಲ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಮತ್ತು ಶಾಸಕ ಹೆಚ್.ಟಿ.ಮಂಜು ರವರ ಸಹೋದರ ಹೆಚ್.ಟಿ.ಲೋಕೆಶ್ ನೇತೃತ್ವದಲ್ಲಿ ಆಂಜನೇಯ ಸ್ವಾಮಿ ದೇಗುಲಕ್ಕೆ ಆಗಮಿಸಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯರ್ತರು ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಮತ್ತು ಧೀರ್ಘಾಯಸ್ಸು ಕೋರಿ ವಿಶೇಷ ಅಭಿಷೇಕ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಹೆಚ್.ಡಿ.ಕೆ ಕೇವಲ ಜೆಡಿಎಸ್ ಪಕ್ಷದ ಆಸ್ತಿಯಲ್ಲ. ಬದಲಾಗಿ ಅವರು ರಾಜ್ಯದ ಸಮಸ್ತ ಜನರ ಆಸ್ತಿ. ರೈತ ಸಮುದಾಯದ ಬಗ್ಗೆ ಸದಾ ಚಿಂತಿಸುವ ಹೆಚ್.ಡಿ.ಕೆ ರಾಜ್ಯದ ರೈತರ ನಾಯಕ. ತಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲರ ಪ್ರತಿರೋಧದ ನಡುವೆಯೂ ರೈತರ ಸಾಲಮನ್ನಾ ಕೀರ್ತಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲುತ್ತದೆ. ಚೆನ್ನೈನ ಖಾಸಗಿ ಅಸ್ಪತ್ರೆಯಲ್ಲಿ ಹೆಚ್.ಡಿ.ಕೆ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯಾಗಿದ್ದು ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನಸೇವೆಗೆ ಮರಳಬೇಕು. ರಾಜ್ಯದ ಜನ ಕುಮಾರಣ್ಣನ ಸೇವೆಯನ್ನು ಬಯಸುತ್ತಿದ್ದಾರೆಂದರು.
ಶಾಸಕರ ಸಹೋದರ ಹೆಚ್.ಟಿ.ಲೋಕೇಶ್ ಮಾತನಾಡಿ ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಅವರು ಕುಮಾರಣ್ಣ ಅವರ ಆರೋಗ್ಯ ವಿಚಾರಿಸಲು ಚೆನ್ನೈ ನಗರಕ್ಕೆ ಹೋಗಿದ್ದಾರೆ. ಇಲ್ಲಿನ ಎಲ್ಲಾ ಕಾರ್ಯಕರ್ತರು ಕುಮಾರಣ್ಣ ಅವರ ಆರೋಗ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸುತ್ತಿದ್ದೇವೆಂದರು. ಹೆಚ್.ಡಿ.ಕೆ ಅಧಿಕಾರದ ಅವಧಿಯಲ್ಲಿ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ದಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದ ಅವರು ತಾಲೂಕಿನಲ್ಲಿ ಹೇಮಾವತಿ ನೀರು ರೈತರ ಭೂಮಿಗೆ ಹರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕಾರಣಕರ್ತರಾದರೆ ಪಟ್ಟಣದ ತಾಲೂಕು ಆಡಳಿತ ಸೌಧ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು, ಇಂಜಿನಿಯರಿಂಗ್ ಕಾಲೇಜು,ಬಸ್ ಡಿಪೆÇೀ, ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿದ್ದು, ಹಲವು ವಿದ್ಯುತ್ ಸಬ್ ಸ್ಟೇಷನ್ ಗಳು ಸೇರಿದಂತೆ ಜನರ ನೆನಪಿನಲ್ಲಿ ಉಳಿಯುವ ಹಲವು ಅಭಿವೃದ್ದಿ ಕಾರ್ಯಗಳನ್ನು ಹೆಚ್.ಡಿ.ಕೆ ಮಾಡಿದ್ದಾರೆ. ಅವರು ಮಂಡ್ಯ ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಮಂಡ್ಯದ ಜನರ ಸೇವೆಗೆ ಬರಬೇಕೆಂಬುದು ನಮ್ಮೆಲ್ಲರ ಆಶಯ. ಅದಕ್ಕಾಗಿ ಕುಮಾರಣ್ಣ ಅವರಿಗೆ ಆರೋಗ್ಯ ಮತ್ತು ಆಯಸ್ಸು ನೀಡುವಂತೆ ನಾವೆಲ್ಲರೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದೇವೆಂದರು.
ಪೂಜಾ ಕಾರ್ಯಕ್ರಮದಲ್ಲಿ ಮನ್ ಮುಲ್ ನಿರ್ದೇಶಕ ಡಾಲು ರವಿ, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಟಿ.ಬಲದೇವ್, ಮಂಜುನಾಥ್, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಬೂಕನಕೆರೆ ಹುಲ್ಲೇಗೌಡ, ಪುರಸಭೆ ಮಾಜಿ ಸದಸ್ಯ ಹೊಸಹೊಳಲು ರಾಜು, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್, ತಾಲೂಕು ಜೆಡಿಎಸ್ ಮುಖಂಡರಾದ ಮಾಕವಳ್ಳಿ ವಸಂತ ಕುಮಾರ್, ಸಂತೇಬಾಚಹಳ್ಳಿ ರವಿ ಕುಮಾರ್, ಹೆಗ್ಗಡಹಳ್ಳಿ ಅಲೋಕ್, ಸೊಳ್ಳೇಪುರ ಬಾಲಕೃಷ್ಣ, ಜೆಡಿಎಸ್ ಯುವ ಘಟಕದ ಸಚಿನ್ ಕೃಷ್ಣ, ಪಟ್ಟಣದ ನಾಗರೀಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವು ಕಾರ್ಯಕರ್ತರು ಪೂಜಾ ಕಾರ್ಯಕ್ರಮದಲ್ಲಿದ್ದರು.