ಕಪ್ಪಡಿ ಶ್ರೀ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಜಾತ್ರಾ ಮಹೋತ್ಸವ
ಸಂಜೆವಾಣಿ ವಾರ್ತೆ
ಕೆ.ಆರ್.ನಗರ ಮಾ.22:- ಇದೇ ಪ್ರಥಮ ಬಾರಿಗೆ ಆರೋಗ್ಯ ತಪಾಸಣೆಯಯ ಜತೆಗೆ ಕೃಷಿ ಮೇಳ, ದೇಶಿ ಕುಸ್ತಿ ಪಂದ್ಯಾವಳಿಯ ಜತೆಗೆ ವಿವಿಧ ಕಾರ್ಯಕ್ರಮಗಳನ್ನು ರೈತರು, ಭಕ್ತರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಳವಳ್ಳಿ, ಆದಿ-ಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಮಠ ಮತ್ತು ಶ್ರೀ ಕಪ್ಪಡಿ ಕ್ಷೇತ್ರದ ಮಠಾಧಿಪತಿ ಶ್ರೀ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗ ರಾಜೇ ಅರಸ್ ರವರು ತಿಳಿಸಿದರು.
ಮಾ,22 ರ ಶುಕ್ರವಾರದಂದು, ಕೃಷಿ ಮೇಳ ಹಾಗೂ ಕೃಷಿ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10:45 ರಿಂದ 11:15ರವರೆಗೆ. ಕಾರ್ಯಕ್ರಮದ ಉದ್ದೇಶವನ್ನು ತಿಳಿಸುವುದು, ಮಧ್ಯಾಹ್ನ 12ರಿಂದ ಸಂಜೆ 5:30 ರವರೆಗೆ ವಿವಿಧ ವಿಚಾರಗೋಷ್ಠಿಗಳು, ವಿಚಾರವಿನಿಮಯ, ಮತ್ತು ಉಪನ್ಯಾಸಗಳಿರುತ್ತವೆ ಎಂದು ಬುಧವಾರ ಕಪ್ಪಡಿ ಕ್ಷೇತ್ರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮೈಕ್ರೋಬಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ಖ್ಯಾತ ಸಾವಯವ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡರಿಂದ ಸುಸ್ಥಿರ ಸಾವಯವ ಕೃಷಿ ಬಗ್ಗೆ ಉಪನ್ಯಾಸ. ದಡದಹಳ್ಳಿ ಇಂದ್ರಪ್ರಸ್ಥದ ಡಾ.ಎ.ಪಿ.ಚಂದ್ರಶೇಖರ್ ರವರಿಂದ ಕೃಷಿ ಪದಾರ್ಥಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಬಗ್ಗೆ ಉಪನ್ಯಾಸ. ಇಲವಾಲದ ತೋಟಗಾರಿಕಾ ಮಹಾವಿದ್ಯಾಲಯ ಕೀಟ ತಜ್ಞ ಡಾ.ರಾಮೇಗೌಡರಿಂದ ಕೀಟ ನಿಯಂತ್ರಣಗಳಿಗೆ ಕಷಾಯಗಳಿಂದ ನಿಯಂತ್ರಣ ಹಾಗೂ ಪ್ರಾತ್ಯಕ್ಷಿಕೆ ನೀಡಲಾಗುವುದೆಂದರು.
ಸುತ್ತೂರು ಕೆ.ವಿ.ಕೆಯ ಡಾ.ರಾಜಣ್ಣರಿಂದ ಭೂಮಿ, ಮಣ್ಣು ಫಲವತ್ತತೆ ಹೆಚ್ಚಿಸುವುದು, ಮಿರ್ಲೆ ಇಂದ್ರಮ್ಮರಿಂದ ಸ್ವಸಹಾಯ ಗುಂಪಿನ ಯಶಸ್ಸಿನ ಹಾದಿ ಕುರಿತು ಅನುಭವ ಹಂಚಿಕೆ, ನ್ಯಾಷನಲ್ ಡೈಂ ರೀಸರ್ಚ್ ಇನ್ಸ್ಟಿಟ್ಯೂಟ್ ನಿವೃತ್ತ ನಿರ್ದೇಶಕ ಡಾ.ರಮೇಶ್‍ರಿಂದ ದೇಸಿ ಹಸುಗಳ ಸಮಗ್ರ ಮಾಹಿತಿ.ಪಿರಿಯಾಪಟ್ಟಣದ ಹಿಟ್ಟನೆ ಹೆಬ್ಬಾಗಿಲಿನ ಕಾಳಪ್ಪರಿಂದ ದೇಸಿ ಬೀಜಗಳ ಮಹತ್ವ. ಹೆಗ್ಗವಾಡಿಪುರ ಶಿವಕುಮಾರಸ್ವಾಮಿಯವರಿಂದ ತೋಟಗಾರಿಕೆ ಬೆಳೆಗಳ ಸಮಗ್ರ ಮಾಹಿತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಮೇಳದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳ ವತಿಯಿಂದ ಮಳಿಗೆಗಳನ್ನು ತೆರೆದು ರೈತರಿಗೆ ಇಲಾಖೆಗಳ ವತಿಯಿಂದ ಸಿಗುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ಕಲ್ಪಿಸುವುದು. ರೈತರು, ಕೃಷಿ ಆಸಕ್ತರು ಮತ್ತು ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಎತ್ತಿನ ಗಾಣದಿಂದ ಅಡುಗೆ ಎಣ್ಣೆ ತೆಗೆಯುವ ಘಟಕದ ಪ್ರಾತ್ಯಕ್ಷಿಕೆ, ದೇಸಿ ಹಸುಗಳು ಹಾಗೂ ಎತ್ತುಗಳ ಪ್ರದರ್ಶನ, ದೇಸಿ ಬೀಜ ಸಂರಕ್ಷಕರು, ಗೋ ಉತ್ಪನ್ನಗಳು, ಔಷಧೀಯ ಸಸ್ಯಗಳು, ಕೀಟ ಹಾಗೂ ರೋಗ ನಿಯಂತ್ರಣಗಳಿಗೆ ಕಷಾಯ ತಯಾರಿಕೆಯಂತಹ ವೈವಿಧ್ಯಮಯವಾದ ಕಾರ್ಯಕ್ರಮಗಳಿರುತ್ತವೆ. ಸಂಜೆ ಕೃಷಿ ಜೀವನ ಆಧಾರಿತ ಭೂಚೇತನ ನಾಟಕ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳನ್ನು ರೈತರ ಅನುಕೂಲಕ್ಕಾಗಿ ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
ಮಾ,27 ರಂದು ದೇಶಿ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು ಶ್ರೀ ಮಂಟೇಸ್ವಾಮಿ ಮಠವು ಹಲವು ದತಕಗಳಿಂದ ವಿವಿಧ ಪ್ರಯತ್ನಗಳ ಮೂಲಕ ನೀಲಗಾರರ ಪರಂಪರೆಯನ್ನು ಸಂರಕ್ಷಿಸಲು ಶ್ರಮಿಸುತ್ತಿದ್ದು, ಅನೇಕ ಸಾಮಾಜಿಕ ಉಪಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಸರ್ಕಾರಿ ಶಾಲೆಗಳೊಂದಿಗೆ ಕೆಲಸ ಮಾಡುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿಲು ಪರಂಜ್ಯೋತಿ ಫೌಂಡೇಷನ್ ಸ್ಥಾಪಿಸಿದ್ದು ಮುನ್ನಡೆಸಿಕೊಂಡು ಹೋಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಮಾ,14 ರಂದು ಅಖಿಲ ಭಾರತ ವಾಕ್ ಮತ್ತು ಶ್ರವಣ ದಿವ್ಯ ಚೇತನರಿಗೆ ತಪಾಸಣಾ ಶಿಬಿರ ಆಯೋಜನೆ ಮಾಡಿದ್ದು ಅನೇಕ ದಿವ್ಯ ಚೇತನರಿಗೆ ಅನುಕೂಲವಾಗಿದೆ. ಮಾ,21 ಮತ್ತು ಮಾ,28 ರಂದು ಕೂಡ ಶಿಬಿರವನ್ನು ಆಯೋಜಿಸಲಾಗಿದೆ. ಪರಿಸರ ಸ್ನೇಹಿ ಜಾತ್ರೆಗೆ ಒತ್ತು ನೀಡಲಾಗಿದೆ ಎಂದರು.
ಮಹಾಶಿವರಾತ್ರಿಯಂದು ಆರಂಭಗೊಂಡಿರುವ ಜಾತ್ರೆಯು ಏ,4ರಂದು ಕೊನೆಗೊಳ್ಳಲಿದ್ದು ಮಹಾಮಾದಲಿ ಸೇವೆ ಏ,3 ರಂದು ನೀಲಗಾರರ ಸಂಪ್ರದಾಯಗಳ ಪ್ರಕಾರ ನಡೆಯಲಿದೆ. ಜಾತ್ರೆಗೆ 30 ಶೌಚಾಗೃಹಗಳ ನಿರ್ಮಾಣ, ಹೊಸದಾಗಿ ಸಾಂಸ್ಕೃತಿಕ ವೇದಿಕೆ, ಉರಿಗದ್ದುಗೆ ಮುಂದೆ, ಹೊಳೆಯ ಭಾಗ, ನೆಲಮಳಿಗೆ ಹಾಗೂ ಮಠದ ಹಿಂಭಾಗದಲ್ಲಿ ಚಪ್ಪಡಿ ಹಾಸು ಕೆಲಸವನ್ನು ಮಾಡಿಸಲಾಗಿದ್ದು ಜೊತೆಗೆ ಮೇಲ್ಟಾವಣಿಗೆ ಪಫ್ ಶೀಟ್‍ಗಳನ್ನು ಹಾಸಿ ಅಭಿವೃದ್ಧಿ ಮಾಡಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೆÇೀಲಿಸ್, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಈಗಾಗಲೇ ಹೆಚ್ಚಿನ ಸಹಕಾರ ನೀಡಿತ್ತಿದೆ ಎಂದರಲ್ಲದೇ ಸರ್ವ ಧರ್ಮ ಸಮನ್ವಯತೆಯನ್ನು ಸಾರುವ ಸೊಬಗಿನ ಜನಪದ ಜಾತ್ರೆಗೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ರಾಚಪ್ಪಾಜಿ ರವರು ಹಾಗೂ ಚೆನ್ನಾಜಮ್ಮಣ್ಣಿ ರವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಶ್ರೀ ಮಠದ ಸಿಬ್ಬಂದಿಗಳಾದ ಕೆ.ಎಂ.ಲಿಂಗರಾಜು, ಭರತ್, ದೇಸಿ ಸಿರಿ ಉತ್ಪನ್ನಗಳ ನವೀನ್, ಎಪಿಎಂಸಿ ಮಾಜಿ ನಿರ್ದೇಶಕ ರಾಜಶೇಖರ್, ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಧು ಇನ್ನಿತರರು ಇದ್ದರು.