ಮತ ಜಾಗೃತಿಗೆ ಮನೆ ಮನೆಗೂ ತೆರಳಿದ ಜಿಪಂ ಸಿಇಒ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಿ, ಮತದಾನ ಅರಿವು ನಿಮಗೂ ಇರಲಿ ನಿಮ್ಮ ಕುಟುಂಬಕ್ಕೂ ತಿಳಿಸಿಕೊಡಿ ಹೀಗೆ ಕರಪತ್ರಗಳನ್ನು ಹಿಡಿದು ಪ್ರತಿ ಮನೆ ಮನೆಗೂ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯಿತ್ರಿ ಮತದಾನದ ಜಾಗೃತಿ ಮೂಡಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಆಡಳಿತ, ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಯಿಂದ ಲೋಕಸಭಾ ಚುನಾವಣೆ 2024ರ ಅಂಗವಾಗಿ ಮಾದರಿ ನೀತಿ ಸಂಹಿತೆ ಹಾಗೂ ಸ್ವೀಪ್ ಜಾಗೃತಿಗೆ ಗುರುವಾರ ಬೋಗಾದಿ ಪಟ್ಟಣ ಪಂಚಾಯಿತಿಯ ಜೆಟ್ಟಿಹುಂಡಿ ಗ್ರಾಮದಲ್ಲಿ ಅವರು ಚಾಲನೆ ನೀಡಿದರು. ಬಳಿಕ ಅಂಗನವಾಡಿ ಕಾರ್ಯಕರ್ತೆಯರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಜತೆಗೂಡಿ ಮಾನವ ಸರಪಳಿ ನಿರ್ಮಿಸಿದರದಲ್ಲೇ ಮತದಾನದ ಪ್ರತಿಜ್ಞಾವಿಧಿ ಭೋದಿಸುವ ಮೂಲಕ ಮತದಾನ ಕುರಿತು ಅರಿವು ಮೂಡಿಸಲಾಯಿತು.
ಇದೇ ವೇಳೆ ಮನೆ ಮನೆಗೆ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯಿತ್ರಿ ವೃದ್ಧ ಮತದಾರರಿಗೆ ಮುಕ್ತ ಮತದಾನಕ್ಕೆ ಜಿಲ್ಲಾಡಳಿತದ ನೆರವುಗಳ ಕುರಿತು ತಿಳಿಸಿಕೊಟ್ಟರು.
ಅಲ್ಲದೆ, ವೃದ್ಧರು ಹಾಗೂ ವಿಶೇಷಚೇತನರಿಗೆ ವಾಹನ ಸೌಲಭ್ಯ ಹಾಗೂ ಮನೆಯಿಂದಲೇ ಮತದಾನದ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿ, ಪ್ರತಿಯೊಬ್ಬರೂ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಯುವ ಮತದಾರರು ಸಹ ನಿಮ್ಮ ಗುರುತಿನ ಚೀಟಿ ಇರುವ ಬಗ್ಗೆ ಆಪ್ ಮೂಲಕ ಖಚಿತ ಪಡಿಸಿಕೊಳ್ಳಬಹುದಾಗಿದೆ. ಸಿ ವಿಜಲ್ ಆಪ್ ಮೂಲಕ ಚುನಾವಣಾ ಅಕ್ರಮಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಿಕೊಡುವ ಮೂಲಕ ನ್ಯಾಯ ಸಮ್ಮತ ಚುನಾವಣೆಗೆ ಸಹಕಾರ ನೀಡಬೇಕೆಂದು ಜಾಗೃತಿ ಮೂಡಿಸಿದರು.
ಕೇವಲ ಒಂದು ದಿನಕ್ಕೆ ಇಂತಹ ಜಾಗೃತಿ ಕಾರ್ಯಕ್ರಮ ಸೀಮಿತವಾಗಿರಿಸಿಕೊಳ್ಳದೇ ಪ್ರತಿನಿತ್ಯವೂ ಒಂದಿಲ್ಲೊಂದು ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಮತದಾನ ಜಾಗೃತಿ ಮೂಡಿಸುವ ಸ್ವಚ್ಛತಾ ವಾಹನಗಳಿಗೂ ಚಾಲನೆ ನೀಡಿದರಲ್ಲದೆ, ಮನೆಗೆ ಮತದಾನದ ಅರಿವಿನ ಕರಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಹಾಯಕ ಸ್ವೀಪ್ ನೋಡೆಲ್ ಅಧಿಕಾರಿಗಳಾದ ಶಾಂತ. ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಹೆಚ್.ಆರ್.ಸುರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿಯಾದ ಮಂಜುನಾಥ್ ಅಂಗನಾಡಿ ಕಾರ್ಯಕರ್ತೆಯರು ಸೇರಿ ಇತರರು ಹಾಜರಿದ್ದರು.