ಮಾ.24ಕ್ಕೆ ಮೈಸೂರಲ್ಲಿ ಬಿಜೆಪಿ ಸಮಾವೇಶ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ಇದೇ ತಿಂಗಳ ಮಾ.24ರಂದು ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜನಗರ ಬಿಜೆಪಿ ಅಭ್ಯರ್ಥಿಗಳು ಹಾಗೂ ಹಾಲಿ, ಮಾಜಿ ಶಾಸಕ, ಸಂಸದರು ಮತ್ತು ಸಮುದಾಯದ ನಾಯಕರು ಭಾಗಿಯಾಗುವರೆಂದು ಮಾಜಿ ಮೇಯರ್ ಶಿವಕುಮಾರ್ ತಿಳಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ನಗರ ಮತ್ತು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾವತಿಯಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಾಲ್ಮೀಕಿ ಜಯಂತಿ ಆಚರಣೆ ಸೇರಿ ಪರಿಶಿಷ್ಟ ಪಂಗಡ ಆಯೋಗದ ರಚನೆ, ಸಮುದಾಯದ ಮೀಸಲಾತಿಯನ್ನು ಏರಿಕೆ ಮಾಡಿದ್ದು ನಮ್ಮ ಸರ್ಕಾರವೇ ಆಗಿದೆ. ಪರಿವಾರ, ತಳವಾರ ಸಮುದಾಯವನ್ನ ಎಸ್ಟಿಗೆ ಸೇರಿಸಿರುವುದು ಸೇರಿ ಅನೇಕ ಕೊಡುಗೆ ನೀಡಿದ್ದು, ಇವೆಲ್ಲವನ್ನೂ ತಿಳಿಸಿಕೊಡುವ ನಿಟ್ಟಿನಲ್ಲಿ ಮಾ.24ರಂದು ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯರಿಂದಲೇ ದ್ರೋಹ: ಕಾನೂನು ಬದ್ಧವಾಗಿ ಎಸ್ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಸಮುದಾಯಗಳ ಜನರಿಗೆ ಅನ್ಯಾಯ ಮಾಡಿದ್ದಾರೆ. ಅಹಿಂದ ನಾಯಕರೆಂದು ತೋರ್ಪಡಿಸಿಕೊಂಡು ಎಸ್ಸಿ, ಎಸ್ಟಿ ಸಮುದಾಯಗಳನ್ನು ಕಡೆಗಣಿಸಿದ್ದಾರೆ. ಬುಡಕಟ್ಟು ಸಮುದಾಯದವರಾಗಿ ರಾಷ್ಟ್ರಪತಿಯಂತಹ ಉನ್ನತ ಹುದ್ದೆಯಲ್ಲಿರುವ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಭೋಸಿರುವುದು ಸಿಎಂ ಅವರ ಮಾನಸ್ಥಿತಿ ತೋರುತ್ತದೆ. ರಾಷ್ಟ್ರಪತಿ ಭವನ ಉದ್ಘಾಟನೆ, ರಾಮಮಂದಿರ ಉದ್ಘಾಟನೆ ವಿಚಾರ ರಾಷ್ಟ್ರಪತಿಗಳ ಗಮನಕ್ಕೆ ತಂದು ಅವರ ಅನುಮತಿಯಲ್ಲೇ ಕಾರ್ಯಕ್ರಮ ನಡೆದಿದ್ದರೂ ಅವರನ್ನು ಆಹ್ವಾನಿಸಿಲ್ಲವೆಂದು ರಾಜಕೀಯಕ್ಕಾಗಿ ತಪ್ಪು ಮಾಹಿತಿ ನೀಡುವ ಕೆಲಸ ಕಾಂಗ್ರೆಸ್ ಪಕ್ಷದಿಂದ ಆಗಿದೆ ಎಂದು ದೂರಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗೆ 10ಸಾವಿರ ಕೋಟಿ ರೂ ಘೋಷಿಸಿ, ಮೊದಲ ಕಂತಾಗಿ ಒಂದುವರೆ ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆಂದು ಯಾವುದೇ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಆದರೆ, ಬೊಮ್ಮಾಯಿಯವರ ಬಿಜೆಪಿ ನೇತೃತ್ವದ ಸರ್ಕಾರ ಶೇ.3ರಿಂದ ಶೇ7.5ಕ್ಕೆ ಮೀಸಲಾತಿ ಹೆಚ್ಚಿಸಿದೆ. ರಾಜ್ಯಾದ್ಯಾಂತ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನಗಳನ್ನು ನೀಡಿವೆ. ಸಾಮಾನ್ಯ ವರ್ಗಕ್ಕಿದ್ದ ಪಾಲಿಕೆ ಮೇಯರ್ ಸ್ಥಾನವನ್ನು ಎಸ್ಟಿ ಸಮುದಾಯಕ್ಕೆ ನೀಡಿದೆ. ಮೇಯರ್ ಆಗಿ ನಾನು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್ಟಿ ಮೋರ್ಚಾದ ನಗರಾಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಗ್ರಾಮಾಂತರ ಜಿಲ್ಲಾಧ್ಯಕ್ಷ ಮುದ್ದುಕೃಷ್ಣ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ನಾರಾಯಣ್ ಲೋಲಪ್ಪ, ಕೃಷ್ಣ ನಾಯಕ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತರಿದ್ದರು.