ವಿಷ ಉಣಿಸುವುದು ಎಚ್‍ಡಿಕೆಗೆ ಕರಗತ
ಸಂಜೆವಾಣಿ ನ್ಯೂಸ್
ಮೈಸೂರು:ಮಾ.22:- ರಾಜಕೀಯವಾಗಿ ಮತ್ತೊಬ್ಬರಿಗೆ ವಿಷವುಣಿಸುವುದು ಕುಮಾರಸ್ವಾಮಿಯವರಿಗೆ ಕರಗತವಾಗಿದೆ ಹೊರತು ಡಿಕೆ ಸಹೋದರರಿಗಲ್ಲ ಎಂದು ನಗರ ಕಾಂಗ್ರೆಸ್ ಸಮಿತಿ ವಕ್ತಾರ ಎಸ್.ರಾಜೇಶ್ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಡಿ.ಕೆ.ಶಿವಕುಮಾರ್ ಸಹೋದರರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬದುಕಿಗೆ ವಿಷವುಣಿಸಿದ್ದಾರೆಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಖಾರವಾಗಿ ಪ್ರತಿಕ್ರಯಿಸಿದ ಅವರು, ಎಚ್‍ಡಿಕೆ ಅವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು. ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡನೇ ಅವಧಿಗೆ ಸಿಎಂ ಸ್ಥಾನ ಬಿಟ್ಟುಕೊಡುವುದಾಗಿ ನಂಬಿಸಿ ಬೆನ್ನಿಗೆ ಚೂರಿ ಹಾಕಿದವರು ಯಾರೆಂದು ಕುಮಾರಸ್ವಾಮಿಯವರು ಪ್ರಶ್ನೆ ಮಾಡಿಕೊಳ್ಳಲಿ ಎಂದರು.
ಪುಟ್ಟರಾಜ ಅವರನ್ನು ಮಂಡ್ಯ ಕ್ಷೇತ್ರದ ಲೋಕಸಭಾ ಚುನಾವಣೆ ಅಭ್ಯರ್ಥಿಯನ್ನಾಗಿಸುವುದಾಗಿ ಮಾತು ಕೊಟ್ಟು, ಈಗ ತಾವೇ ಅಭ್ಯಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಡಿ.ಕೆ. ಶಿವಕುಮಾರ್ ಅವರು ರಾಜ್ಯದಾದ್ಯಂತ ಕಾಂಗ್ರೆಸ್ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದ್ದಾರೆ. ಹೀಗಾಗಿ ಕಾಂಗ್ರೆಸ್‍ಗೆ ದ್ರೋಹ ಬಗೆಯಲು ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಎಲ್ಲರಿಗೂ ವಿಷವುಣಿಸುವವರು ಅವರೇ ಆಗಿದ್ದಾರೆಂದರು. ಕುರುಬಾರಹಳ್ಳಿ ಪ್ರಕಾಶ್, ಎಸ್.ಎ. ರಹೀಂ, ರವಿ, ಇಬ್ರಾಹಿಂ ಇದ್ದರು.