ರಾಜ್ಯಾಧ್ಯಕ್ಷರ ಅನುಮೋದನೆ ಮೂಲಕ ಅಷ್ಠಗಿ ವಜಾ: ತೇಗಲತಿಪ್ಪಿ
ಕಲಬುರಗಿ:ಮಾ.21: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಎರಡುವರೆ ವರ್ಷಗಳಿಂದ ಸಾಹಿತ್ಯ, ಕಲೆ, ಸಂಗೀತ ಮತ್ತು ಸಾಂಸ್ಕøತಿಕವಾಗಿ ಅರ್ಥಪೂರ್ಣ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಇಡೀ ಜಿಲ್ಲೆಯ ಜನತೆಗೆ ಗೊತ್ತಿರುವ ಸಂಗತಿ. ಹೀಗಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಿಂದಿನ ಗೌರವ ಕಾರ್ಯದರ್ಶಿ ಯಶ್ವಂತರಾಯ್ ಅಷ್ಟಗಿ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳಿಸಲು ಪರಿಷತ್ತಿನ ಪದಾಧಿಕಾರಿಗಳ ಬದಲಾವಣೆ ನಮಗೆ ಅನಿವಾರ್ಯವಾಗಿದೆ. ಯಶ್ವಂತರಾಯ್ ಅಷ್ಟಗಿ ಅವರು ಕಳೆದ ಎರಡೂವರೆ ವರ್ಷಗಳು ನನ್ನ ಜೊತೆ ಇದ್ದ ಸಂದರ್ಭದಲ್ಲಿ ನನ್ನ ಸರ್ವಾಧಿಕಾರ ಧೋರಣೆ ಅವರ ಕಣ್ಣಿಗೆ ಕಾಣದಿರುವುದು, ಈ ಎರಡು ದಿನಗಳಲ್ಲಿ ಎಲ್ಲಿಂದ ಏಕಚಕ್ರಾಧಿಪತ್ಯ ಕಂಡು ಬಂತು ಎಂಬುದು ಹಾಸ್ಯಾಸ್ಪದ ಹೇಳಿಕೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ನಾನು ಕಳೆದ ಇಪ್ಪತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸಾಂಸ್ಕøತಿಕ ಸಂಘಟನೆಯನ್ನು ಮಾಡುತ್ತಾ ಬಂದಿದ್ದೇನೆ. ಇಷ್ಟು ವರ್ಷಗಳ ಪರಿಶ್ರಮದ ಫಲವಾಗಿ ಜಿಲ್ಲೆಯ ಜನತೆ ನನಗೆ ಕನ್ನಡ ಸಾರಸ್ವತ ಲೋಕದ ಬಹು ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಜನರ ವಿಶ್ವಾಸ ಉಳಿಸುವ ಕಾರ್ಯ ಮಾಡಿದ್ದೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಹಿತ್ಯಿಕ ಚಟುವಟಿಕೆಗಳು ಮಾಡುತ್ತಿರುವ ಕಾರಣಕ್ಕಾಗಿ ಪರಿಷತ್ತಿನಲ್ಲಿ ಭೌತಿಕವಾಗಿಯೂ ಅನೇಕ ರೀತಿಯ ಬದಲಾವಣೆಗಳು ಆಗಿದ್ದು ಯಾರೂ ಮರೆಯುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನೇ ಅರಿಯದ ಅಷ್ಟಗಿಯವರು ನಿಯಮಗಳ ಬಾಹಿರವಾಗಿ ಪರಿಷತ್ತನ್ನು ಮುನ್ನಡೆಸುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಮೊದಲು ಪರಿಷತ್ತಿನ ನಿಬಂಧನೆಗಳನ್ನು ಅಧ್ಯಯನ ಮಾಡಲಿ, ಆಮೇಲೆ ಆರೋಪ ಮಾಡಲಿ ಎಂದು ತೇಗಲತಿಪ್ಪಿ ಅವರು ಸಲಹೆ ನೀಡಿದ್ದಾರೆ.
ಪರಿಷತ್ತಿನ ಕಾರ್ಯಕ್ರಮಗಳ ಸಂಘಟನೆಗೆ ಸಮಯ ಕೊಡಬೇಕು ಹೊರತು, ಫೋಟೋ ಫೋಸ್‍ಗೆ ಅಲ್ಲ. ಕೇವಲ ಪ್ರಚಾರ ಪಡೆಯುವುದು ಬಿಟ್ಟು ನಿಜವಾದ ಕನ್ನಡ ಕಟ್ಟುವ ಕೆಲಸ ಮಾಡಲಿ, ಆಮೇಲೆ ನನ್ನ ಬಗ್ಗೆ ಮಾತನಾಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಅನುಮೋದನೆ ಪಡೆದ ನಂತರವೇ ಮತ್ತೊಬ್ಬರನ್ನು ಅವರ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಅಧಿಕಾರದ ವ್ಯಾಪ್ತಿಯೇ ಗೊತ್ತಿರದ ಅಷ್ಟಗಿಯವರು, ಪರಿಷತ್ತಿನ ಬಗ್ಗೆ ಮಾತಾಡುವ ನೈತಿಕತೆ ಅವರಿಗಿಲ್ಲ. ಪರಿಷತ್ತು ನಾಡಿನಲ್ಲಿಯೇ ಘನತೆವೆತ್ತ ಸಂಸ್ಥೆಯಾಗಿದೆ. ಪರಿಷತ್ತಿನ ಘನತೆ ಹೆಚ್ಚಿಸುವ ಕಾರ್ಯ ನಾವುಗಳು ಮಾಡುತ್ತಿದ್ದೇವೆ. ಜಿಲ್ಲೆಯನ್ನು ಸಾಂಸ್ಕøತಿಕ ಜಿಲ್ಲೆಯನ್ನಾಗಿಸುವ ಗುರಿಯನ್ನಿಟ್ಟುಕೊಂಡು ನಿರಂತರವಾಗಿ ಕಾರ್ಯ ಚಟುವಟಿಕೆಗಳು ನಡೆಸುತ್ತಿದ್ದೇವೆ ಎಂದು ಅವರು ಗುಡುಗಿದ್ದಾರೆ.
ಕನ್ನಡ ಕಟ್ಟುವ ಕೆಲಸ ಮಾಡಿ, ಅದನ್ನು ಬಿಟ್ಟು ರಾಜಕೀಯವಾಗಿ ಹೇಳಿಕೆ ಕೊಡುವ ನಿಮ್ಮ ಪ್ರವೃತ್ತಿ ಬದಲಾಯಿಸಿಕೊಳ್ಳಿ. ಅವರು ಪರಿಷತ್ತಿಗೆ ಸಮಯ ಕೊಡದೆ ಇದ್ದರೂ, ಪರಿಷತ್ತು ಮಾತ್ರ ನಿಮಗೆ ಸಾಕಷ್ಟು ಪ್ರಚಾರ ಕೊಟ್ಟಿದೆ ಎಂಬುದು ಯಾವತ್ತೂ ಮರೆಯಬಾರದು ಎಂದು ಅವರು ಅವರು ಕಿಡಿಕಾರಿದ್ದಾರೆ.
ಎಲ್ಲರ ವಿಶ್ವಾಸದೊಂದಿಗೆ ಪರಿಷತ್ತನ್ನು ಹೊಸ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಪ್ರತಿಭೆಗಳಿಗೆ ಪ್ರೋತ್ಸಾಹ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಪರಿಷತ್ತಿಗೆ ಯಾವುದೇ ಜಾತಿ, ಧರ್ಮ ಇಲ್ಲವೆಂಬುದು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ಅವರು ಬುದ್ದಿವಾದ ಹೇಳಿದ್ದಾರೆ.