ಉತ್ತಮಿಕೆ ಬದುಕಿನ ನಿರಂತರ ಪ್ರಕ್ರಿಯೆ: ಬೆಲ್ದಾಳ ಶರಣರು
ಕಲಬುರಗಿ:ಮಾ.21: ಧರ್ಮ ಮತ್ತು ರಾಜಕೀಯ ಕ್ಷೇತ್ರಗಳು ಹಾದಿ ಬಿಟ್ಟು ನಡೆಯುತ್ತಿದ್ದು ಅವುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಉತ್ತಮಿಕೆ ಎಂಬುದು ಬದುಕಿನ ನಿರಂತರ ಪ್ರಕ್ರಿಯೆ ಎಂಬುದನ್ನು ಎಲ್ಲರೂ ನೆನಪಿಟ್ಟು ಹೊಣೆಗಾರಿಕೆಯಿಂದ ವರ್ತಿಸಬೇಕಿದೆ ಎಂದು ಬಸವ ಕಲ್ಯಾಣದ ನೀಲಾಂಬಿಕಾ ಬಸವಯೋಗ ಕೇಂದ್ರದ ಡಾ.ಸಿದ್ಧರಾಮ ಬೆಲ್ದಾಳ ಶರಣರು ಕಿವಿಮಾತು ಹೇಳಿದರು.
ಇಲ್ಲಿನ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಬಸವರಾಜ ಶಿವಕೇರಿ ಅಭಿನಂದನಾ ಸಮಿತಿ, ಮಹಾಕಾಶಿ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಬಸವ ದೀಪ್ತಿ ಗ್ರಂಥ ಲೋಕಾರ್ಪಣೆ ಹಾಗೂ ಸಂವಿಧಾನ-ಧರ್ಮ-ರಾಜಕಾರಣ ಕುರಿತ ವಿಶೇಷ ಉಪನ್ಯಾಸ, ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಾದರೆ ಮೊದಲು ಧರ್ಮ ಮತ್ತು ರಾಜಕಾರಣ ತನ್ನ ಪ್ರಾಮಾಣಿಕ ವ್ಯಾಪ್ತಿ ಮತ್ತು ಪರಿಧಿಯ ಜೊತೆಗೆ ಹೊಣೆಗಾರಿಕೆ ಅರ್ಥ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ವೈಯಕ್ತಿಕ ಬದುಕಿನ ರೀತಿಯಲ್ಲಿಯೇ ಈ ಕ್ಷೇತ್ರಗಳ ಉತ್ತಮಿಕೆಗೂ ಶ್ರಮಿಸಬೇಕಿದೆ ಎಂದು ಕರೆ ನೀಡಿದರು.
ನಮಗಾಗಿ ಬದುಕುವು ಮುಖ್ಯವಲ್ಲ. ನಮ್ಮ ವೈಯಕ್ತಿಕ ಬದುಕಿನ ಜೊತೆಗೆ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ ಎಂದ ಶ್ರೀಗಳು, ಸಾರ್ಥಕ ಬದುಕನ್ನು ನಡೆಸುತ್ತಿರುವ ಬಸವರಾಜ ಶಿವಕೇರಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಬಸವ ದೀಪ್ತಿ ಕೃತಿಯ ಕುರಿತು ಸಾಹಿತಿ ಡಾ.ಚಿ.ಸಿ.ನಿಂಗಣ್ಣ ಮಾತನಾಡಿ, ಇದೊಂದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.
ಅಣದೂರಿನ ವರಜ್ಯೋತಿ ಭಂತೆ ನೇತೃತ್ವ ವಹಿಸಿದ್ದರು. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಲಿಂಗಣ್ಣ ಗೋನಾಲ ಅಧ್ಯಕ್ಷತೆ ವಹಿಸಿದ್ದರು. ಬೆರಳಚ್ಚು ಮತ್ತು ಶೀಘ್ರಲಿಪಿ ಹಾಗೂ ಗಣಕಯಂತ್ರ ವಿದ್ಯಾಶಾಲೆಗಳ ಸಂಘದ ಅಧ್ಯಕ್ಷ ಆರ್.ಎಸ್.ಯೋಗೇಶ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಎಂ.ಎಸ್. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಬುದ್ಧಘೋಷ ದೇವೇಂದ್ರ ಹೆಗ್ಗಡೆ, ಪತ್ರಕರ್ತ, ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ, ಡಾ.ರಾಜಶೇಖರ ಮಾಂಗ್, ಡಾ.ಪುಟ್ಟಮಣಿ ದೇವಿದಾಸ ಭಾಗವಹಿಸಿದ್ದರು.
ಡಾ.ವಿಜಯಕುಮಾರ ಸಾಲಿಮನಿ ಅವರು ಬಸವರಾಜ ಶಿವಕೇರಿ ಕುರಿತು ಮಾತನಾಡಿದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಸ್ವಾಗತಿಸಿದರು. ಅಭಿನಂದನಾ ಕೃತಿ ಸಂಪಾದಕ ಡಾ.ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿಯ ಪ್ರಧಾನ ಸಂಪಾದಕ ಶೆಳ್ಳಗಿ ದೇವೇಂದ್ರ, ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಕುಲಕರ್ಣಿ ವೇದಿಕೆಯಲ್ಲಿದ್ದರು.
ಬಸವರಾಜ ಶಿವಕೇರಿ ಹಾಗೂ ಸುವರ್ಣಾ ಬಸವರಾಜ ಶಿವಕೇರಿ ಅವರನ್ನು ಅಭಿಮಾನಿಗಳು ಸನ್ಮಾನಿಸಿದರು. ಪ್ರಾಧ್ಯಾಪಕ ಡಾ.ಪಂಡಿತ ಬಿ.ಕೆ. ನಿರೂಪಿಸಿದರು. ಬಿ.ಎಸ್.ಮಾಲಿ ಪಾಟೀಲ್ ವಂದಿಸಿದರು.
ಬದುಕಿನ ಮೌಲ್ಯಮಾಪನವೇ ಅಭಿನಂದನಾ ಕೃತಿ
ಅಭಿನಂದನಾ ಗ್ರಂಥಗಳು ವ್ಯಕ್ತಿಯೊಬ್ಬನ ಬದುಕಿನ ಎಲ್ಲ ಸ್ತರಗಳನ್ನು ತೆರೆದಿಡುತ್ತದೆ. ಹಾಗಾಗಿ, ಅಭಿನಂದನಾ ಕೃತಿ ಎಂದ ಕೂಡಲೇ ಅದನ್ನು ನಿಧಾನವಾಗಿ ಪಕ್ಕಕ್ಕೆ ಸರಿಸುವುದರ ಬದಲು, ಅದರ ಮೇಲೆ ಕಣ್ಣಾಡಿಸಿದರೆ ಬದುಕೆಂಬ ಭತ್ತದ ಗದ್ದೆಯಲ್ಲಿ ಎಷ್ಟು ಇಳುವರಿ ತೆಗೆದಿದ್ದೇವೆ, ರಾಶಿ ಎಷ್ಟಾಗಿದೆ ಎಂಬುದರ ಮೌಲ್ಯಮಾಪನ ಕಣ್ಣ ಮುಂದೆ ನಿಲ್ಲುತ್ತದೆ ಎಂದು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ನುಡಿದರು.
ಬಸವ ದೀಪ್ತಿ ಕೃತಿ ಬಿಡುಗಡೆಗೊಳಿಸಿದ ಬಳಿಕ ಸಂವಿಧಾನ-ಧರ್ಮ-ರಾಜಕಾರಣ ಕುರಿತು ಉಪನ್ಯಾಸ ನೀಡಿದ ಅವರು, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಸಾರುವುದು ನಮ್ಮ ಸಂವಿಧಾನದ ನೈಜ ಆಶಯವಾಗಿದೆ. ಶಾಸ್ತ್ರ ಅದಕ್ಕೆ ವಿರುದ್ಧವಾಗಿದೆ. ರಾಜಕಾರಣ ಮತ್ತು ಧರ್ಮ ಒಟ್ಟಿಗೆ ಹೋಗಬೇಕೋ, ಬೇಡವೋ ಎಂಬ ಚಿಂತನೆ ನಡೆದಿರುವಾಗ ಸಂವಿಧಾನ ನಡುವೆ ಬಂದು ಇವೆರಡರ ಇತಿಮಿತಿಗಳನ್ನು ಅರ್ಥ ಮಾಡಿಸುವ ಕೆಲಸ ಮಾಡುತ್ತಿದೆ ಎಂದು ವ್ಯಾಖ್ಯಾನಿಸಿದರು.
ಧರ್ಮ ಎಂದರೆ ಸತ್ಯದ ಕಡೆಗೆ ಸಾಗುವುದು, ದಯೆ, ಕರುಣೆ ತೋರುವುದಾಗಿದೆ. ಧರ್ಮ ಹರಿವ ನೀರಿನಂತಿರಬೇಕು. ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.
ವ್ಯಕ್ತಿಪೂಜೆ, ನಿರಂಕುಶ ಆಡಳಿತ ವೈಖರಿ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿದೆ. ಪೂಜೆ ವೈಚಾರಿಕ ಚಿಂತನೆಯನ್ನು ನಾಶ ಮಾಡುತ್ತದೆ. ನರಕವಾಗಿದ್ದ ಭಾರತವನ್ನು ಸಂವಿಧಾನದ ಮೂಲಕ ಸದೃಢಗೊಳಿಸುವ ಪ್ರಯತ್ನಗಳು ನಡೆದವು. ಮತಪೆಟ್ಟಿಗೆಯಿಂದ ರಾಜಕುಮಾರ ಆಯ್ಕೆಯಾಗುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ರಾಮರಾಜ್ಯದಲ್ಲಿರುವ ಆದರ್ಶದ ಮೌಲ್ಯಗಳಿಗಿಂತ ಭೀಮರಾಜ್ಯದ ವಿಚಾರಗಳು ಬಹಳ ಪ್ರಸ್ತುತ ಎನಿಸುತ್ತವೆ ಎಂದು ಮಾಲಗತ್ತಿ ಹೇಳಿದರು.