ಜಿಲ್ಲಾಧ್ಯಕ್ಷರ ಪದಚ್ಯುತಿಗೆ ಪ್ರೊ.ಯಶವಂತರಾಯ ಆಗ್ರಹ ಕಸಾಪ ಜಿಲ್ಲಾಧ್ಯಕ್ಷ ತೇಗಲತಿಪ್ಪಿ ವಿರುದ್ಧ ಸರ್ವಾಧಿಕಾರಿ ಧೋರಣೆ ಆರೋಪ
ಕಲಬುರಗಿ,ಮಾ.21: ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ತೇಗಲತಿಪ್ಪಿ ಅವರು ಕಳೆದ ಮೂರು ವರ್ಷಗಳಿಂದ ಪರಿಷತ್ತಿನ ಖರ್ಚು-ವೆಚ್ಚಗಳ ಕುರಿತು ಲೆಕ್ಕ ಪರಿಶೋಧನೆ (ಆಡಿಟ್) ಕೈಗೊಳ್ಳದೆ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಪರಿಷತ್ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಟಗಿ ಆರೋಪಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಡೆದ ಜಿಲ್ಲಾ ಮತ್ತು ತಾಲೂಕು ಸಮ್ಮೇಳನಗಳ ಖರ್ಚು-ವೆಚ್ಚದ ಬಗ್ಗೆ ಪರಿಷತ್ತಿನ ಸಾಕಷ್ಟು ಆಜೀವ ಸದಸ್ಯರು ಲೆಕ್ಕ ಪರಿಶೋಧನೆ ನಡೆಸಿ ಲೆಕ್ಕಪತ್ರ ಸಮರ್ಪಕವಾಗಿಡುವಂತೆ ಸಲಹೆ ನೀಡಿದರೂ, ತೇಗಲತಿಪ್ಪಿ ಯಾರ ಮಾತಿಗೂ ಮಾನ್ಯತೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ಪರಿಷತ್ತಿನ ಲೆಕ್ಕಪತ್ರಗಳ ಆಡಿಟ್ ಕೈಗೊಳ್ಳುವಂತೆ ತಾವು ಸಲಹೆ ನೀಡಿದ ಕಾರಣಕ್ಕಾಗಿ ತಮ್ಮ ವಿರುದ್ಧ ವೈಯಕ್ತಿಕ ದ್ವೇಷ ಸಾಧನೆ ಮಾಡುತ್ತಿರುವ ಅಧ್ಯಕ್ಷ ತೇಗಲತಿಪ್ಪಿ, ಯಾರದ್ದೇ ಗಮನಕ್ಕೆ ತರದೆ ಗೌರವ ಕಾರ್ಯದರ್ಶಿ ಹುದ್ದೆಗೆ ಮತ್ತೊಬ್ಬರನ್ನು ನೇಮಕ ಮಾಡಿದ್ದಾರೆ. ಹೀಗೆ ಗೌರವ ಕಾರ್ಯದರ್ಶಿ ಹುದ್ದೆಗೆ ಇಬ್ಬರನ್ನು ನೇಮಕ ಮಾಡಲು ಅವಕಾಶವಿಲ್ಲ ಎಂಬುದು ಗೊತ್ತಿದ್ದಾಗ್ಯೂ, ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದರು.
ಸಾಹಿತ್ಯ ಪರಿಷತ್ತಿನ ನಿಯಮಾವಳಿಗಳ ಪ್ರಕಾರ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಯಾರನ್ನೇ ಬದಲಾಯಿಸಬೇಕಿದ್ದರೆ ಅವರ ಹೆಸರನ್ನು ನಮೂದಿಸಿ, ಸಮಿತಿಯ ಒಪ್ಪಿಗೆ ಪಡೆದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಅಭಿಪ್ರಾಯದ ವರದಿ ರವಾನಿಸಬೇಕಾಗುತ್ತದೆ. ಆದರೆ, ಇದ್ಯಾವುದನ್ನೂ ಮಾಡದೆ ತೇಗಲತಿಪ್ಪಿ ಅವರು ಕೀಳುಮಟ್ಟದ ರಾಜಕೀಯ ಮಾಡುತ್ತಾ ಒಂದೇ ಕೋಮಿನಲ್ಲಿ ಕಲಹ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಲಬುರಗಿ ಜಿಲ್ಲಾ ಕಸಾಪ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಕೋಣೆಗೆ ಶ್ರೀವಿಜಯ ಸದನ ಎಂದು ನಾಮಕರಣ ಮಾಡಿ, ವೈಯಕ್ತಿಕವಾಗಿ ತಮ್ಮ ಹೆಸರು ವೈಭವೀಕರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ವ್ಯಾಪಕ ಚರ್ಚೆ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಯಶವಂತರಾಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಲ್ಲಿ ಏಕಚಕ್ರಾಧಿಪತ್ಯಕ್ಕೆ ಆದ್ಯತೆ ನೀಡುತ್ತಿರುವ ತೇಗಲತಿಪ್ಪಿ ಅವರನ್ನು ಕೂಡಲೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕು. ಇಲ್ಲದೆ ಹೋದರೆ ಜಿಲ್ಲೆಯಾದ್ಯಂತ ಅಭಿಪ್ರಾಯ ಸಂಗ್ರಹ ಕೈಗೊಂಡು ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದರು.
ಶರಣಗೌಡ ಪಾಟೀಲ್ ಪಾಳಾ, ಬಸವಂತರಾಯ ಕೋಳಕೂರ ಮತ್ತು ಶಿವಯೋಗಿ ಭಜಂತ್ರಿ ಇದ್ದರು.