ಜಿಲ್ಲಾಮಟ್ಟದ ಅಥ್ಲೆಟಿಕ್ ಗೆ ಚಾಲನೆ
ಬೆಂಗಳೂರು, ಸೆ. ೧೮- ನಗರದಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಭಾರತ ಕರ್ನಾಟಕ ಹಾಗೂ ಬೆಂಗಳೂರು ಜಿಲ್ಲಾ ಸ್ಪೆಷಲ್ ಒಲಿಂಪಿಕ್ಸ್ ಸಹಯೋಗದೊಂದಿಗೆ ಆಯೋಜಿಸಿದ ಜಿಲ್ಲಾ ಮಟ್ಟದ “ಅಥ್ಲೆಟಿಕ್” ಪಂದ್ಯಾವಳಿಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವಥ ನಾರಾಯಣ ಅವರ ಜೊತೆಗೂಡಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಸಿ.ಎನ್ ಅಶ್ವತ್ ನಾರಾಯಣ್ ರವರು ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಈ ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಉತ್ತಮವಾದದ್ದು ಈ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ಎಲ್ಲರೂ ಮಾಡಬೇಕೆಂದು, ಈ ಪಂದ್ಯಾವಳಿಯಲ್ಲಿ ೬೦೦ಕ್ಕೂ ಹೆಚ್ಚು ವಿಶೇಷ ಮಕ್ಕಳು ಭಾಗವಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಡಿ.ಡಿ.ಡಬ್ಲೂ.ಓ. ಶ್ರೀ ಕೃಷ್ಣಮೂರ್ತಿ ಜಿ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಎಸ್.ಓ.ಬಿ.ಕೆ ಗೆ ಅಗತ್ಯವಾದ ನೆರವನ್ನು ಇಲಾಖೆ ವತಿಯಿಂದ ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಎಸ್‌ಓಬಿಕೆ ಉಪಾಧ್ಯಕ್ಷರಾದ ಮತ್ತು ಬೆಂಗಳೂರು ವಲಯ ಉಸ್ತುವಾರಿಗಳಾದ ಶ್ರೀ ರೂಪ್ ಸಿಂಗ್ ಮತ್ತು ಎಸ್‌ಓಬಿಕೆ ಏರಿಯಾ ಡೈರೆಕ್ಟರ್ ಶ್ರೀ ಅಮರೇಂದ್ರ ಎ ಅವರು ಈ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜನೆ ಮಾಡಿದ್ದರು.
ಈ ಸಂದರ್ಭದಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಭಾರತ-ಕರ್ನಾಟಕ ಖಜಾಂಚಿಯಾದ ಶ್ರೀ ಆನಂದ ಡಿ.ಸಿ, ಫೈನಾನ್ಸ್ ಎಕ್ಸ್ಪರ್ಟ್ ಶ್ರೀ.ಶ್ರೀನಾಥ್ ಎ ಎನ್, ಕಾನೂನು ತಜ್ಞರಾದ ಶ್ರೀಮತಿ ಹೀರಾವತಿ, ಬೆಂಗಳೂರು ಜಿಲ್ಲಾ ಸಮಿತಿ ಅಧ್ಯಕ್ಷರಾದ ಸುಚಿತ್ರ ಸೋಮಶೇಖರಯ್ಯ, ವಿಶೇಷ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎಸ್.ಓ ಬಿ.ಕೆ ಆಫೀಸಿಯಲ್ಸ್ ಗಳು, ಮಕ್ಕಳು, ಪೋಷಕರುಗಳು ಉಪಸ್ಥಿತರಿದ್ದರು.