ಚುನಾವಣೆ ಬಾಂಡ್ ನಿಂದ ಬಿಜೆಪಿಯಿಂದ ದೇಶದ ಲೂಟಿ:ಗಣಿಹಾರ
ವಿಜಯಪುರ,ಮಾ.21 ಚುನಾವಣೆ ಬಾಂಡ್ ಹೆಸರಿನಲ್ಲಿ ಬಿಜೆಪಿ ದೊಡ್ಡ ಹಗರಣ ಮಾಡಿದೆ. ದೇಶವನ್ನು ಲೂಟಿ ಮಾಡಿದೆ. ಅದನ್ನು ಮುಚ್ಚಿ ಹಾಕಲು ಕಾನೂನನ್ನು ಬಿಜೆಪಿ ಜಾರಿಗೆ ತಂದಿತ್ತು. ಸುಪ್ರೀಂ ಕೋರ್ಟ್ ಈ ಹಗರಣದ ವಿವರ ಬಹಿರಂಗಪಡಿಸಲು ಚಾಟಿ ಬೀಸಿದ್ದರಿಂದ ಮಾರನೇ ದಿನ ಎಸ್.ಬಿ.ಐ ಮಾಹಿತಿ ನೀಡಿದೆ. ಈಗ ಬಿಜೆಪಿ ಕೋಟ್ಯಂತರ ಬಾಂಡ್ ಖರೀದಿಸಿರುವ ಹಗರಣ ಬಯಲಿಗೆ ಬಿದ್ದಿದೆ ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋರ್ಟ್ ವಿಚಾರಣೆ ಹಂತದಲ್ಲಿಯೂ ಬಿಜೆಪಿ 8310 ಕೋಟಿ ಬಾಂಡ್ ಮುದ್ರಣ ಮಾಡಿದೆ. 13000 ಕೋಟಿ ಸರಕಾರ ವೆಚ್ಚ ಮಾಡಿ ಈ ಬಾಂಡ್ ಮುದ್ರಣ ಮಾಡಿದೆ ಎಂದರು.
ಆರೋಗ್ಯ ಕಂಪನಿಗಳು ಹೆಚ್ಚು ಬಾಂಡ್ ಖರೀದಿಸಿವೆ. ಜನರ ಆರೋಗ್ಯ ಬಿಜೆಪಿಗೆ ಬೇಕಿಲ್ಲ. ಪಿಎಂ ಕೇರ್ ಫಂಡ್ ನಲ್ಲಿಯೂ ಹಗರಣದ ಸಂಶಯ ಮೂಡಿದೆ. ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸ್ವಿಸ್ ಬ್ಯಾಂಕಿನಿಂದ ಕಪ್ಪು ಹಣ ತರಲಿಲ್ಲ. ಎಸ್.ಬಿ.ಐ ಚೇರ್ಮನ್ ನಿವೃತ್ತಿ ವಯಸ್ಸು ಮುಗಿದರೂ ಚುನಾವಣೆ ಬಾಂಡ್ ಹಗರಣ ಮಾಡಲು ಸೇವೆಯಲ್ಲಿ ಮುಂದುವರೆಸಿದ್ದಾರೆ. ಅವರನ್ನು ಕೂಡಲೇ ವಜಾ ಮಾಡಬೇಕು ಎಂದರು.
ಪುಲ್ವಾಮ್ ಹಗರಣ ಬಗ್ಗೆ ತನಿಖೆ ನಡೆಸಬೇಕು. ಪುಲ್ವಾಮ್ ಘಟನೆಯಲ್ಲಿ ಸೈನಿಕರು ಮೃತಪಟ್ಟಾಗ ಮೋದಿ ಗದ್ಗದಿತರಾಗಲಿಲ್ಲ. ಆರ್.ಎಸ್.ಎಸ್ ಕಾರ್ಯಕರ್ತ ಮೃತಪಟ್ಟರೆ ಗದ್ಗದಿತರಾಗುತ್ತಾರೆ ಎಂದರು.
ಚುನಾವಣೆ ಬಾಂಡ್ ಹಗರಣ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಡಾ. ರವಿ ಬಿರಾದಾರ, ನಾಗರಾಜ ಲಂಬು ಪತ್ರಿಕಾಗೋಷ್ಠಿಯಲ್ಲಿ ಇದ್ದರು.