ಸೌಹಾರ್ದತೆಯೇ ಬಸವ ತತ್ವದ ಜೀವಾಳ : ಮೂಲಗೆ
ಔರಾದ :ಮಾ.21: ವ್ಯಕ್ತಿಯ ಬದುಕಿನ ಸಮಸ್ಯೆಗಳಿಂದ ಜಾಗತಿಕ ಸಮಸ್ಯೆಗಳಿಗೂ ಪರಿಹಾರ ಬಸವ ತತ್ವದಲ್ಲಿದ್ದು, ಬಸವಣ್ಣನ ವಚನಗಳು ನಮಗೆ ಪಚನವಾದಾಗ ಮಾತ್ರ ಸೌಹಾರ್ದತೆ, ಸಾಮರಸ್ಯದಿಂದ ಬದುಕಲು ಸಾಧ್ಯ, ಸೌಹಾರ್ದತೆ, ಸಾಮರಸ್ಯ ಬಸವ ತತ್ವದ ಜೀವಾಳ ಎಂದು ಕಸಾಪ ಮಾಜಿ ಅಧ್ಯಕ್ಷ, ಸಾಂಸ್ಕøತಿಕ ಚಿಂತಕ ಜಗನ್ನಾಥ ಮೂಲಗೆ ಅಭಿಪ್ರಾಯಪಟ್ಟರು.
ಪಟ್ಟಣದ ನಳಗೆ ಮಹಾಮನೆಯಲ್ಲಿ ದಿವಂಗತ ಸೋಮನಾಥ ನಳಗೆ ಅವರ ದ್ವಿತೀಯ ಸ್ಮರಣೋತ್ಸವ ಹಾಗೂ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ ಮಹಾತ್ಮರು ನೀಡಿದ ಎಲ್ಲ ತತ್ವಗಳು ನಮ್ಮ ಮನೆ ಮನೆಗಳಲ್ಲಿ ಜ್ಯೋತಿಯಾಗಿ ಪ್ರಜ್ವಲಿಸಬೇಕು.
ಮಹ್ಮದ ಪೈಗಂಬರ್, ಯೇಸು ಕ್ರಿಸ್ತ, ಗೌತಮ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶಗಳು ನಮ್ಮ ಬದುಕಿನ ಭಾಗವಾಗಬೇಕು. ನಾಡಿನ ಹಿರಿಯ ಸಾಹಿತಿ ರಂಜಾನ್ ದರ್ಗಾ ಅವರು ಶರಣ ತತ್ವದ ಕುರಿತು ಮಾಡಿರುವ ಸಾಹಿತ್ಯ ಕೃಷಿ ಕುರಿತು ಹಲವು ನಿದರ್ಶನಗಳ ಮೂಲಕ ವಿವರಿಸಿದರು.
ನಿವೃತ್ತ ಪ್ರಾಚಾರ್ಯ ಬಾಬುರಾವ ಬೋರಾಳೆ ಮಾತನಾಡಿ, ಸೋಮನಾಥ ನಳಗೆ ಅವರ ಜೀವನ ನಮಗೆ ಸದಾ ಆದರ್ಶವಾಗಿದೆ ಎಂದರು. ಹಿರಿಯ ಶಿಕ್ಷಕ ಗುರುನಾಥ ದೇಶಮುಖ ಮಾತನಾಡಿ, ಮಾನವೀಯತೆಯ ಬದುಕಿಗೆ ವಚನಗಳು ದಾರಿದೀಪವಾಗಿವೆ ಎಂದರು.
ಈ ಸಂದರ್ಭದಲ್ಲಿ ಪೂಜ್ಯ ಮಹಾದೇವಮ್ಮ ತಾಯಿ ಆಶಿರ್ವಚನ ನೀಡಿದರು. ಭಾರತೀಯ ಬಸವ ಬಳಗದ ಅಧ್ಯಕ್ಷ ಡಾ.ಧನರಾಜ ರಾಗಾ, ಅಂಬಾದಾಸ ನಳಗೆ, ದೇವಿದಾಸ ನಳಗೆ, ಮಹಾನಂದಾ ಎಂಡೆ, ಜ್ಯೋತಿ ಗುಡುರೆ ಸೇರಿದಂತೆ ಇನ್ನಿತರರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದ, ನ್ಯಾಯವಾದಿ ಪುರುಷೋತ್ತಮ ದೇಸಾಯಿ, ಮಾಣಿಕಪ್ಪ ಗುಡುರೆ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.