ದಲಿತ ಸಮುದಾಯಗಳ ಸರ್ವಾಂಗೀಣ ಏಳಿಗೆ ಫೌಂಡೆಶನ್ ಮೂಲ ಉದ್ದೇಶ; ಸೂರ್ಯವಂಶಿ
ಬೀದರ್:ಮಾ.21: ದಲಿತ ಸಮುದಾಯದ ಸವಾರ್ಂಗೀಣ ಏಳಿಗೆ ಫೌಂಡೆಶನ್ ಮೂಲ ಉದ್ದೇಶವಾಗಿದ್ದು, ಸಮಾಜದ ಅಭಿವೃದ್ಧಿಗೆ ಬುದ್ಧರ ಮಾರ್ಗ ಹಾಗೂ ಅಂಬೇಡ್ಕರರ ಹಾಕಿ ಕೊಟ್ಟ ಸ್ಪಷ್ಟ ಹಾಗೂ ನಿರ್ದಿಷ್ಟ ನೀತಿಗಳ ತಳಹದಿಯಲ್ಲಿ ಕಾರ್ಯ ಚಟುವಟಿಕೆ ನಡೆಸುವ ಒಂದು ಸಂಸ್ಥೆ ರೂಪದಲ್ಲಿ ಕಟ್ಟಲಾಗಿದೆ ಎಂದು ಮೂಲನಿವಾಸಿ ಫೌಂಡೇಶನ್ ಸಂಸ್ಥಾಪಕ ಸದಸ್ಯರು ಹಾಗೂ ಸಮಾಜದ ಹಿರಿಯರಾದ ವೈಜಿನಾಥ ಸೂರ್ಯವಂಶಿ ತಿಳಿಸಿದರು.
ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ದಲಿತ ಸಮುದಾಯದ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಶಕ್ತಿ ವರ್ಧಿಸುವುದು, ವಿವಿಧ ಬಗೆಯ ಕ್ರೀಡಾಕೂಟಗಳು ಆಯೋಜಿಸಿ ಉನ್ನತ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ಸಕಲ ರೀತಿಯಲ್ಲೂ ಬೆಂಬಲಿಸಿ ವೃತ್ತಿಪರ ಕ್ರೀಡಾಪಟು ಆಗಲು ಸಹಾಯ ಮಾಡುವುದು ಫೌಂಡೆಶನ್‍ನ ಮೂಲ ಉದ್ದೇಶವಾಗಿದೆ ಎಂದರು.
ನಗರದಲ್ಲಿ ಒಂದು ಸುಸಜ್ಜಿತ ಸ್ಟೇಟ್ ಆಫ್ ಥೆ ಆರ್ಟ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಕ್ರೀಡಾ ಅಕಾಡೆಮಿ ಸ್ಥಾಪಿಸುವುದು. ಸಮುದಾಯದ ಆರ್ಥಿಕ ಸ್ಥಿತಿ ಸದೃಢಪಡಿಸಿವುದು. ಕೌಶಲ್ಯಾಧಾರಿತ ಉದ್ಯಮ ಅಭಿವೃದ್ಧಿ ಕಾರ್ಯಕ್ರಮ ಆಯೋಜನೆ ಮಾಡುವುದು, ಉದ್ಯೋಗ ಆಧಾರಿತ ಕೋರ್ಸ್‍ಗಳು ಪ್ರಾರಮಭಿಸಿ ಉದ್ಯೋಗ ಸಿಗಲು ಅವಕಾಶ ಒದಗಿಸಲಾಗುವುದೆಂದರು.
ಫೌಂಡೆಶನ್‍ನ ಇನ್ನೂರ್ವ ಸಂಸ್ಥಾಪಕ ಸದಸ್ಯರು ಹಾಗೂ ನಿವೃತ್ತ ಪ್ರಾಚಾರ್ಯರಾದ ಪ್ರೊ.ವಿಠಲದಾಸ ಪ್ಯಾಗೆ ಮಾತನಾಡಿ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ, ಶಿಷ್ಯವೇತನ ಒದಗಿಸುವುದು ಮತ್ತು ವೃತ್ತಿಪರ ಕೋರ್ಸ್‍ಗಳಿಗೆ ಅಡ್ಮಿಷನ್ ಅವಕಾಶಗಳನ್ನು ಒದಗಿಸುವುದು. ಸಮಾಜದಲ್ಲಿ ಸಮುದಾಯದ ಧ್ವನಿಯಾಗಿ ಅವರ ಹಕ್ಕುಗಳ ರಕ್ಷಣೆ ಮತ್ತು ಸಮಾನತೆಯ ಹೋರಾಟದಲ್ಲಿ ಸಹಾಯ ಮಾಡುವುದು, ಸಮಾಜಿಕ ನ್ಯಾಯವನ್ನು ಒದಗಿಸುವ ಪ್ರಯತ್ನ ಮಾಡುವುದು, ಸ್ವತಂತ್ರ್ಯ ಸಮಾನತೆ ಹಾಗೂ ಭ್ರಾತೃತ್ವದ ಹಾಗೂ ಸಂವಿಧಾನದ ಆಶಯಗಳ ಸಂಕೇತವಾದ ಸಮಾಜ ಕಟ್ಟಲು ಯೋಗದಾನ ನೀಡುವುದು ಫೌಂಡೇಶನ್‍ನ ಮತ್ತೊಂದು ಉದ್ದೇಶವಾಗಿದೆ ಎಂದು ತಿಳಿಸಿದರು.
ಫೌಂಡೆಶನ್ ಸಂಯೋಜಕರಾದ ವಿನೋದ ಅಪ್ಪೆ ಮಾತನಾಡಿ, ಫೌಂಡೆಶನ್ ಉಗಮ ಇದೆ 14ನೇ ಏಪ್ರಿಲ್ 2024 ಕ್ಕೆ ಮಾಡುವ ನಿರ್ಣಯ ಆಗಿದ್ದು ಇದರ ಉಪಕ್ರಮವಾಗುವ 2ನೇ ಏಪ್ರಿಲ್ ಇಂದ 7ನೇ ಏಪ್ರಿಲ್ 2024 ಬೀದರ ನಗರದ ನೆಹರೂ ಕ್ರೀಡಾಂಗಣದಲ್ಲಿ 6 ದಿನಗಳ ಬೃಹತ್ ಕ್ರೀಡಾಕೂಟ ಆಯೋಜಿಸಲಾಗುವುದು. ಇದರಲ್ಲಿ ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್, ವಾಲಿಬಾಲ್ ಹಾಗೂ ಕ್ರಿಕೇಟ್ ಟೂರ್ನಮೇಂಟ್ ಆಯೋಜನೆ ಮಾಡುವ ಮೂಲಕ ಪ್ರಮುಖ ಪ್ರತಿಭೆಗಳ ಗುರುತಿಸುವ ಕಾರ್ಯ ಮಾಡುವ ಉದ್ದೇಶ ಇದೆ ಎಂದರು.
ಫೌಂಡೆಶನ್ ಮತ್ತೋರ್ವ ಸಂಯೋಜಕ ವಿನಯ ಮಾಳಗೆ ಮಾತನಾಡಿ, ಕ್ರೀಡಾ ಸ್ಪರ್ಧೇಗಳ ಪ್ರಚಾರ ಪ್ರಸಾರದ ಚಟುವಟಿಕೆಗಳಿಗಾಗಿ ಸಂಸ್ಥೆಯ ಸಂಯೋಜಕರು 5-5 ಜನರ ತಂಡ ಮಾಡಿ ತಾಲ್ಲೂಕಿನ ಎಲ್ಲ ಊರುಗಳಿಗೆ ಹೋಗಿ ಅಂಬೇಡ್ಕರ ಭವನಗಳ/ ಬುದ್ಧ ವಿಹಾರಗಳನ್ನು ಸ್ವಚ್ಛಗೊಳಿಸುವ ಕಾರ್ಯದ ಜೊತೆ ಜೊತೆಗೆ ಬುದ್ಧ ಬಸವ ಅಂಬೇಡ್ಕರ ಸಂದೇಶಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುವ ಗುರಿ ಇದೆ ಎಂದವರು ತಿಳಿಸಿದರು.
ಬಾಬಾ ಸಾಹೇಬ ಅಂಬೇಡ್ಕರ ರವರ ಜಯಂತಿ ಉತ್ಸವವನ್ನು ಅದ್ದೂರಿಯಿಂದ ಮೌಲ್ಯಾಧಾರಿತ, ಅರ್ಥಗರ್ಭಿತವಾಗಿ, ರಚನಾತ್ಮಕ, ಧನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನ ಆಯೋಜಿಸಿ ಸಮಾಜಕ್ಕೊಂದು ಸಕರಾತ್ಮಕ ಸಂದೇಶ ಕೊಡುವ ಪ್ರಯತ್ನ ನಮ್ಮದಾಗಿದೆ ಎಂದರು.
ಫೌಂಡೆಶನ್ ಸಂಯೋಜಕರುಗಳಾದ ವಿನೋದ ಬಂದಗೆ, ಸೂರ್ಯಕಾಂತ ಸಾಧುರೆ, ಪವನ ಮಿಠಾರೆ, ರಾಜಕುಮಾರ ದೊಡ್ಡಿ, ಬಸವರಾಜ ಹೊಸಮನಿ, ಶ್ರೀಧರ ಸೋಮನೋರ್ ಸೇರಿದಂತೆ ಇತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.