ಸಾಧನೆಗೆ ಬಡತನ ಅಡ್ಡಿ ಬರದು: ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು
ಭಾಲ್ಕಿ:ಮಾ.21: ಸಾಧನೆಗೆ ಬಡತನ ಎಂದಿಗೂ ಅಡ್ಡಿಬಾರದು, ನಿರಂತರ ಪ್ರಯತ್ನ, ಆತ್ಮವಿಶ್ವಾಸದಿಂದ ಸಾಧನೆ ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಜಗದ್ಗುರು ಸಂಸ್ಥಾನ ಮಠ ಭಾತಂಬ್ರಾದ ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ತಾಲೂಕಿನ ಭಾತಂಬ್ರಾ ಗ್ರಾಮದ ಶ್ರೀ ಶಿವಯೋಗೀಶ್ವರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಾಧನೆಗೆ ನಿರಂತರ ಪ್ರಯತ್ನ ಬೇಕು. ಉತ್ತರಪ್ರದೇಶದಲ್ಲಿಯ ಕೇವಲ 74 ಮನೆಗಳಿರುವ ಮಾಧವ ಪಟ್ಟಿ ಯನ್ನುವ ಗ್ರಾಮದಲ್ಲಿಯ 50 ಮನೆಗಳಲ್ಲಿ 50ಜನ ಐಎಎಸ್ ಅಧಿಕಾರಿಗಳಿದ್ದಾರೆ. ಉಳಿದ ಮನೆಯ ಎಲ್ಲಾ ವಿದ್ಯಾರ್ಥಿಗಳು ಐಎಸ್‍ಆರ್‍ಓ, ಡಿಆರ್‍ಡಿಓ, ಸೇರಿದಂತೆ ವಿವಿಧ ವೈಜ್ಞಾನಿಕ ಕ್ಷೇತ್ರಗಳಲ್ಲಿ ಉತ್ತಮ ವಿಜ್ಞಾನಿಗಳಾಗಿದ್ದಾರೆ. ಇಂತಹ ಪುಟ್ಟ ಹಳ್ಳಿಯಲ್ಲಿಯೇ ಇಂತಹ ಪ್ರತಿಭೆ ಹುಟ್ಟಿಕೊಳ್ಳಬೇಕಾದರೆ, ನಮ್ಮ ಗ್ರಾಮದಲ್ಲಿಯ ವಿದ್ಯಾರ್ಥಿಗಳಲ್ಲಿ ಏಕೆ? ಇಂತಹ ಪ್ರತಿಭೆಗಳು ಚಿಗುರೊಡಯಬಾರದು. ನಾವು ಹಳ್ಳಿಯವರು, ನಮಗೆ ಏನೂ ಗೊತ್ತಿಲ್ಲ ಎನ್ನುವ ಮನೋಭಾವ ತೊರೆದು, ಸಾಧನೆ ಮಾಡುತ್ತೇನೆ ಎನ್ನುವ ಛಲದಿಂದ ವಿದ್ಯಾಭ್ಯಾಸ ಮಾಡಿದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೈಮಂಡ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಧನರಾಜ ನೀಲಂಗೆ, ನಮ್ಮ ಯಶಸ್ಸು ನಮ್ಮಿಂದಲೇ ಸಾಧ್ಯ. ಬೇರೆಯವರ ಮೇಲೆ ಅವಲಂಬಿತರಾಗದೇ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದಲ್ಲಿ ಯಶಸ್ಸು ಕಂಡುಕೊಳ್ಳಬಹುದು ಎಂದು ಹೇಳಿದರು.
ವಿಶೇಷ ಉಪನ್ಯಾಸ ಮಂಡಿಸಿದ ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶಟ್ಟಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ, 10ನೇ ತರಗತಿಯಲ್ಲಿಯೇ ನಮ್ಮ ಜೀವನದ ತಿರುವು ಪ್ರಾರಂಭವಾಗುವುದು. ನಾವೇನು ಆಗಬೇಕು ಎನ್ನುವ ನಿರ್ಧಾರ ಮಾಡುವ ಘಟ್ಟವೇ ಎಸ್‍ಎಸ್‍ಎಲ್‍ಸಿ ಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಈ ಹಂತದಲ್ಲಿ ವಿಚಲಿತರಾಗದೇ ಉತ್ತಮವಾಗಿ ವಿದ್ಯಾಭ್ಯಾಸಮಾಡಿ ಜೀವನದ ಗುರಿ ಸಾಧಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ವಿರಶೆಟ್ಟಿ ಹಲಬರ್ಗೆ, ಶ್ರೀ ಶಿವಯೋಗೀಶ್ವರ ಪ್ರೌಢಶಾಲೆಯಲ್ಲಿ ಅತಿ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಈ ಪ್ರೌಢಶಾಲೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜಗತ್ತು ಬದಲಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಆದರೆ ಯಾವುದೂ ಬದಲಾಗಿಲ್ಲ, ಸೂರ್ಯ, ಚಂದ್ರ, ಗಿಡ, ಮರ, ಹಣ್ಣು, ಹೂವು ಎಲ್ಲವೂ ಹಾಗೆಯೇ ಇದೆ. ವಿದ್ಯಾರ್ಥಿಗಳು ಜಗತ್ತಿನ ನಿಯಮದಂತೆ ಮುನ್ನಡೆದು ಸಾಧನೆಯ ಹಾದಿಯಲ್ಲಿ ಕ್ರಮಿಸಬೇಕು. — ಶ್ರೀ ಜಗದ್ಗುರು ಶಿವಯೋಗೀಶ್ವರ ಮಹಾಸ್ವಾಮಿಗಳು ಭಾತಂಬ್ರಾ.