ಕೆ.ಎಸ್.ಈಶ್ವರಪ್ಪರಿಗೆ ಬೆಂಬಲ ಘೋಷಿಸಿದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ. ೨೧: ಮಾಜಿ ಉಪಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಲು ಮತ್ತು ಅವರಿಗೆ ಬೆಂಬಲ ನೀಡಲು ಶಿವಮೊಗ್ಗಕ್ಕೆ ಬಂದಿರುವುದಾಗಿ ಮಾಜಿ ಸಚಿವ ಹಾಗೂ ಭೋವಿ ಸಮಾಜದ ಮುಖಂಡ ಗೂಳಿ ಹಟ್ಟಿ ಶೇಖರ್ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪನವರು ಕಟ್ಟಾ ಹಿಂದು ಧರ್ಮದ ಅಭಿಮಾನಿಗಳಾಗಿದ್ದಾರೆ. ದೇವರ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ. ಅವರು ನಮ್ಮ ಹಿತವನ್ನು ಯಾವಾಗಲೂ ಬಯಸಿದ್ದಾರೆ. ನಮಗೆ ಬೆಂಬಲ ನೀಡಿದ್ದಾರೆ. ನಮ್ಮಗೆ ಪ್ರೇರಣೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡುವುದು ನನ್ನ   ಕರ್ತವ್ಯವಾಗಿದೆ ಎಂದರು.ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಚುನಾವಣೆ ಮುಗಿಯುವವರಿಗೂ ನಾನು ಅವರ ಜೊತೆಯೇ ಇರುತ್ತೇನೆ. ನಮ್ಮ ಸಮಾಜದಲ್ಲಿಯೂ ಕೂಡ ಹಲವರು ಬಿಜೆಪಿಯಲ್ಲಿಯೂ ಇದ್ದಾರೆ. ಅಂತವರ ಮನಸ್ಸನ್ನು ನಾನು ಸೆಳೆಯುತ್ತೇನೆ. ಈಶ್ವರಪ್ಪರವರನ್ನು ಬೆಂಬಲಿಸುವAತೆ ಕೇಳಿಕೊಳ್ಳುತ್ತೇನೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯವೇ ಹೊರತು ನಮ್ಮ ಸಮಾಜದ ಅಭಿಪ್ರಾಯವಲ್ಲ. ಭೋವಿ ಸಮಾಜದಲ್ಲಿ ಎಲ್ಲಾ ಪಕ್ಷದವರು ಇದ್ದಾರೆ ಎಂದರು.ಈಶ್ವರಪ್ಪನವರ ಹಾಗೆ ಬಿಜೆಪಿಯಲ್ಲಿ ಹಲವರಿಗೆ ಅನ್ಯಾಯವಾಗಿದೆ. ಸಿ.ಟಿ.ರವಿ, ಸದಾನಂದಗೌಡ, ಪ್ರತಾಪ ಸಿಂಹ, ಇವರೆಲ್ಲರನ್ನು ಕೈಬಿಟ್ಟಿರುವುದರಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ. ಬಿಜೆಪಿಯಿಂದ ಭೋವಿ ಸಮಾಜಕ್ಕೆ ಖಂಡಿತ ಅನ್ಯಾಯವಾಗಿದೆ ಎಂದರು.ಈಶ್ವರಪ್ಪನವರು ಸಹ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಯಸಿಯೇ ಬಂಡಾಯವಾಗಿ ನಿಲ್ಲಲ್ಲಿದ್ದಾರೆ. ಹಾಗಾಗಿ ಇದು ಸ್ವಾಗತವು ಹೌದು. ಒಟ್ಟಾರೆ, ಸ್ವತಂತ್ರವಾಗಿ ಇರುವ ನಾನು ಈ ಬಾರಿ ಶಿವಮೊಗ್ಗದಲ್ಲಿ ಈಶ್ವರಪ್ಪನವರ ಪರ ಇರುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ೧.೫ಲಕ್ಷ ಭೋವಿ ಸಮಾಜವಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ೫೦ ಸಾವಿರಕ್ಕು ಹೆಚ್ಚು ಹಾಗೂ ಶಿಕಾರಿಪುರ ಒಂದರಲ್ಲಿಯೇ ೫೫ ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಷ್ಟೊಂದು ಜನಸಂಖ್ಯೆ ಇಟ್ಟುಕೊಂಡು ನಮ್ಮ ಸಮಾಜದವರು ಯಾರು ವಿಧಾನಸಭೆಗೆ ಆಗಲಿ, ಲೋಕಸಭೆಗಾಗಲಿ ಸ್ಪರ್ಧಿಸಿಲ್ಲ. ಯಾವ ಪಕ್ಷಗಳು ಆಧ್ಯತೆ ನೀಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಾದರೂ ೨ ಕ್ಷೇತ್ರಗಳಲ್ಲಿ ಟಿಕೇಟ್ ನೀಡಬೇಕು ಎಂದರು.