ಇಂದು -ನಾಳೆ ನಗರದಲ್ಲಿ ಕೌದಿ ಏಕವ್ಯಕ್ತಿ ನಾಟಕ ಪ್ರದರ್ಶನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮಾ,21-  ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಅವರ ‘ಕೌದಿ’ ನಾಟಕ ಪ್ರದರ್ಶನ ನಗರದಲ್ಲಿ ಇಂದು ಮತ್ತು ನಾಳೆ   ಹಮ್ಮಿಕೊಳ್ಳಲಾಗಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂದು  ಸಂಜೆ 4 ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಜೊತೆ   ‘ಕೌದಿ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಗೌರವ ಅತಿಥಿಗಳಾಗಿ ವಿವಿಯ ಕುಲಸಚಿವ ಎನ್.ರುದ್ರೇಶ್‌, ಮೌಲ್ಯಾಂಕನ ಕುಲಸಚಿವ ಪ್ರೊ. ರಮೇಶ್ ಓಲೇಕಾರ ಹಾಗೂ ವಿವಿಯ ಆರ್ಥಿಕ ಅಧಿಕಾರಿ ನಾಗರಾಜ್ ಭಾಗವಹಿಸುವರು. ವಿವಿಯ ಕುಲಪತಿ ಪ್ರೊ.ಕೆ.ಎಂ.ಮೇತ್ರಿ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದ ನಂತರ ನಾಟಕದಲ್ಲಿ 
ಭಾಗ್ಯಶ್ರೀ ಪಾಳಾ ಅಭಿನಯಿಸುವರು. ಬಳಿಕ ಕೂಡ್ಲಿಗಿ ಕೊಟ್ರೇಶ್ ಅವರ ನಗೆ ಪ್ರದರ್ಶನ ನಡೆಯಲಿದೆ.
ನಾಳೆ ಮಾ.22ರಂದು ನಗರದ ವಿಮ್ಸ್ ವೈದ್ಯ ಭವನದಲ್ಲಿ ಸಂಜೆ 6.30 ಗಂಟೆಕ್ಕೆ  ‘ಕೌದಿ’ ನಾಟಕ
ಪ್ರದರ್ಶನ ನಡೆಯಲಿದೆ. ಮೈಸೂರಿನ ಕವಿತಾ ಕಲಾ ತಂಡ ನಾಟಕವನ್ನು ಪ್ರಸ್ತುತಪಡಿಸಲಿದೆ. ವಿಮ್ಸ್ ಕನ್ನಡ ಸಂಘ ಹಾಗೂ ಜಿಲ್ಲಾ ಕಸಾಪ  ಸಹಯೋಗದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಒಂದು ತಾಸಿನ ಈ ನಾಟಕದಲ್ಲಿ ಕೌದಿಯ ಮಹತ್ವ, ಕೌದಿಯ ಹೊಲಿಯುವವರ ಸಮಸ್ಯೆಗಳು, ಸವಾಲುಗಳು ಹಾಗೂ ಸಂಕಟಗಳೇನು ಎಂಬುದರ ಜೊತೆಗೆ ಆಧ್ಯಾತ್ಮಿಕವಾಗಿ ಕೌದಿ ಹೇಗೆ ಸಂಕೇತಿಸುತ್ತದೆ ಎಂಬುದನ್ನು ನಾಟಕದ ವಸ್ತುವಾಗಿದೆ.
ನಾಟಕ ಆರಂಭಕ್ಕೂ ಮುನ್ನ ಡಾ.ಗಡ್ಡಿ ದಿವಾಕರ ಅವರ ‘ಮೌನ ಮಿಡಿದ ಮಾತು’ ಮೊದಲ ಕವನ ಸಂಕಲನವನ್ನು  ವಿಮ್ಸ್‌ ನಿರ್ದೇಶಕ ಡಾ.ಗಂಗಾಧರ ಗೌಡ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಕೃತಿ ಲೋಕಾರ್ಪಣೆಗೊಳಿಸುವರು.