ಬೇಡಿಕೆ ಈಡೇರಿಕೆಗಾಗಿ ಪೌರಾಯುಕ್ತರಿಗೆ ಮನವಿ
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ21:ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕ್ರಮ ವಹಿಸಿಬೇಕು
ವಿಜಯನಗರ ನಾಗರೀಕ ವೇದಿಕೆ ಹಾಗೂ ವಿನಾಯಕ ನಗರ ಕ್ಷೇಮಾಭಿವೃದ್ದಿ ಸಂಘಟನೆಯ ಪದಾಧಿಕಾರಿಗಳು, ಪೌರಾಯುಕ್ತ ಚಂದ್ರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯನಗರ ನಾಗರಿಕ ವೇದಿಕೆಯ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, ಹೊಸಪೇಟೆ ನಗರವು ಜಿಲ್ಲಾ ಕೇಂದ್ರವಾಗಿದ್ದು, ವಿಶ್ವಪಾರಂಪರಿಕ ತಾಣವಾದ ಹಂಪಿಯು ಹತ್ತಿರದಲ್ಲಿರುವುದರಿಂದ ಪ್ರವಾಸಿ ಕೇಂದ್ರವಾಗಿದೆ. ಅರ್ಜಿದಾರರ ಮನವಿಗಳಿಗೆ ತ್ವರಿತ ಹಾಗೂ ಭ್ರಷ್ಟಾಚಾರ ರಹಿತ ಸೇವೆ ಸಲ್ಲಿಸುವ ಜವಾಬ್ದಾರಿ ನಗರಸಭೆಯ ಮೇಲಿದೆ. ಪೌರಾಯುಕ್ತರು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ಪ್ರತಿ ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆಗೆ ಕ್ರಮಕೈಗೊಳ್ಳಬೇಕು. ಈಗಾಗಲೆ ರಾಜ್ಯ ಸರ್ಕಾರವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಕರೆಯುವ ಆದೇಶ ಹೊರಡಿಸಿದೆ. 
ಹಿರಿಯ ನಾಗರಿಕರು ಮತ್ತು ಮಹಿಳೆ ಅರ್ಜಿದಾರರ ಮನವಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ತಿಂಗಳಲ್ಲಿ ಎರಡು ದಿನ ಇವರ ಅರ್ಜಿಗಳಿಗೆ ವಿಶೇಷ ಆಧ್ಯತೆ ನೀಡಿ ಕಡತ ವಿಲೇವಾರಿಗೊಳಿಸಬೇಕು.
ಫಾರಂ-3 ನವೀಕರಣ ಪ್ರತಿ ಅರ್ಜಿ ಸಲ್ಲಿಕೆಯನ್ನು ಸರಳಗೊಳಿಸುವ ಬಗ್ಗೆ. ಫಾರಂ-3 ನವೀಕರಣ ಪ್ರತಿ ನೀಡಲು ಹೆಚ್ಚುವರಿಯಾಗಿ ಯಾವುದೇ ದಾಖಲೆಗಳನ್ನು ಕಡ್ಡಾಯಗೊಳಿಸಬಾರದು. ಮೊದಲ ಸಲ ಫಾರಂ-3 ಪ್ರತಿಕೊಡುವಾಗ ನಗರಸಭೆಗೆ ಸಲ್ಲಿಸಿದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಫಾರಂ-3 ನವೀಕರಣ ಪ್ರತಿ ಕೊಡಬೇಕೆ ಹೊರತು ಎರಡನೇ ಸಲ ಸಹ ಈ ಹಿಂದೆ ಸಲ್ಲಿಸಿದ ದಾಖಲೆಗಳನ್ನು ಲಗತ್ತಿಸುವ ವ್ಯವಸ್ಥೆ ಕೈಬಿಡಬೇಕು.
ನಗರದಲ್ಲಿ ಎಲ್ಲೆಂದರಲ್ಲಿ ಕಂಡಕಂಡ ಕಡೆ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಿ ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಸರ ಸೃಷ್ಠಿಸುವ ನಿಟ್ಟಿನಲ್ಲಿ ಪ್ರಮುಖ ಸರ್ಕಲ್‍ಗಳು ಹಾಗೂ ಅಗತ್ಯವಿರುವ ಕಡೆ ಮೂತ್ರಾಲಯಗಳ ನಿರ್ಮಾಣ ಮಾಡಬೇಕು.
ಈ ಸಂದರ್ಭದಲ್ಲಿ ಯು.ಆಂಜನೇಯಲು, ಟಿ.ತಿಪ್ಪೇಸ್ವಾಮಿ, ಬಿ.ಜಹಂಗೀರ್, ಕೆ.ಕುಮಾರಸ್ವಾಮಿ, ನಜೀರ್ ಸಾಬ್, ಯು.ಅಶ್ವತಪ್ಪ, ವಿರುಪಾಕ್ಷಪ್ಪ, ರಾಮಕೃಷ್ಣ, ಗೋಪಿನಾಥ, ರಾಮನಮಲಿ, ಕೊಟ್ರೇಶ್, ಮೊಹಮ್ಮದ್ ಬಾಷಾ, ಕೋತಿ ಕೊಟ್ರಪ್ಪ, ನೀಲಕಂಠ, ಎಂ.ಶಂಕ್ರಪ್ಪ, ಸಣ್ಣಕಾಶಿ, ಪ್ರಸಾದ್ ಹಾಗೂ ರಾಘವೇಂದ್ರ ಮುಂಡರಗಿ ಉಪಸ್ಥಿತರಿದ್ದರು.